ಚಿಕ್ಕಮಗಳೂರು : ಮಾನಸಿಕ ಶಾಂತಿ, ನೆಮ್ಮದಿ ಮತ್ತು ಶ್ರೇಯೋಭಿವೃದ್ದಿಗೆ ಆಧ್ಯಾತ್ಮ ಮಾರ್ಗ ಅತ್ಯಂತ ಸಹಕಾರಿ ಎಂದು ಹೃಷಿಕೇಶದ ದಯಾನಂದ ಆಶ್ರಮದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ಭಾನುವಾರ ನಡೆದ ವಾಸವಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ರಜತ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಆಧ್ಯಾತ್ಮದ ಹಾದಿ ನಮಗಲ್ಲ ಅದು ವಯಸ್ಸಾದವರಿಗೆ, ಮಠ, ಆಶ್ರಮಗಳಲ್ಲಿರುವವರಿಗೆ ಎಂಬ ತಪ್ಪು ಭಾವನೆ ಇಂದಿನ ಬಹಳಷ್ಟು ಜನರಲ್ಲಿದೆ ಹಾಗಾಗಿ ಆ ಮಾರ್ಗದಲ್ಲಿ ಸಾಗದೇ ಮಾನಸಿಕ ಶಾಂತಿ, ನೆಮ್ಮದಿಯಿಂದ ಅವರು ದೂರವಾಗಿದ್ದಾರೆ ಎಂದರು.
ದೇಹ, ಮನಸ್ಸು ಮತ್ತು ಬುದ್ದಿಯ ಹತೋಟಿಗೆ ಆಧ್ಯಾತ್ಮ ಅತ್ಯಂತ ಅಗತ್ಯ, ಆಧ್ಯಾತ್ಮ ಜೀವಿಗಳು ದುಃಖಕ್ಕೆ ಮುದುಡದೆ ಸುಖಕ್ಕೆ ಹಿಗ್ಗದೇ ಮನೋವಿಕಾರಗಳಿಂದ ಹೊರತಾಗಿರುತ್ತಾರೆ ಎಂದು ತಿಳಿಸಿದರು.
ಆಧ್ಯಾತ್ಮ ಮತ್ತು ಯೋಗ ಭಾರತ ಜಗತ್ತಿಗೆ ನೀಡಿದ ಕೊಡುಗೆ, ಅವುಗಳನ್ನು ಇಡೀ ವಿಶ್ವದ ಜನ ಆಚರಣೆ ಮಾಡುತ್ತಿದ್ದರೆ ನಮ್ಮವರು ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಿರಾಸಕ್ತಿ ತಾಳಿದ್ದಾರೆ ಎಂದು ವಿಷಾದಿಸಿದ ಅವರು ಈಗಲಾದರೂ ನಾವು ಜಾಗೃತರಾಗದಿದ್ದರೆ ಇನ್ನು ಹತ್ತು ವರ್ಷಗಳಲ್ಲಿ ಪ್ರಾಣಾಯಾಮ ಮತ್ತು ಧ್ಯಾನವನ್ನು ಹಣ ತೆತ್ತು ಕಲಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ಎ.ವಾಸುದೇವ ಮೂರ್ತಿ ಕಳೆದ 25 ವರ್ಷಗಳಿಂದ ಸಂಸ್ಥೆ ಪ್ರತಿವರ್ಷ ಒಂದೂಕಾಲು ಕೋಟಿಗಿಂತಲೂ ಅಧಿಕ ಲಾಭ ಗಳಿಸುತ್ತಾ ಬಂದಿದೆ, ಆರ್ಯವೈಶ್ಯ ಸಮುದಾಯದವರಿಗೆ ಆರ್ಥಿಕ ಸಹಕಾರ ನೀಡಿದೆ ಎಂದು ತಿಳಿಸಿದರು.
ಸಂಘದ ಏಳಿಗೆಗೆ ದುಡಿದವರು ಮತ್ತು ಬೆಳವಣಿಗೆಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಶ್ರೀಗಳಿಂದ ಸತ್ಸಂಗ ನಡೆಯಿತು.
ರಜತ ಮಹೋತ್ಸವದ ಸ್ಮರಣ ಸಂಚಿಕೆ ಸೌಹಾರ್ದ ಸಿಂಚನವನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು, ಕಾರ್ಯಕ್ರಮಕ್ಕೆ ಮುನ್ನ ಶ್ರೀಗಳಿಗೆ ಪೂರ್ಣ ಕುಂಭ ಸ್ವಾಗತ ನೀಡಿ ಮೆರವಣಿಗೆಯಲ್ಲಿ ಕರೆತರಲಾಯಿತು.
ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಎಂ.ವೆಂಕಟಸುಬ್ಬರಾವ್, ವಾಸವಿ ಸೇವಾ ಟ್ರಸ್ಟ್ ಅಧ್ಯಕ್ಷ ಪಿ.ಎಸ್.ಶ್ರೀಧರ್, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಎಸ್.ವೆಂಕಟೇಶ್, ವಾಸವಿ ಯುವಜನ ಸಂಘದ ಅಧ್ಯಕ್ಷ ಜಿ.ಎ.ದಿನೇಶ್ ಗುಪ್ತಾ, ಮಹಿಳಾ ಮಂಡಳಿ ಅಧ್ಯಕ್ಷೆ ಗಾಯತ್ರಿ ದ್ವಾರಕಾನಾಥ್, ಸಂಘದ ಉಪಾಧ್ಯಕ್ಷ ಕೆ.ಎಸ್.ಸತೀಶ್, ನಿರ್ದೇಶಕಿ ಜಯಂತಿ ಶೇಖರ್ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಮಾನಸಿಕ ಶಾಂತಿ, ನೆಮ್ಮದಿ ಮತ್ತು ಶ್ರೇಯೋಭಿವೃದ್ದಿಗೆ ಆಧ್ಯಾತ್ಮ ಮಾರ್ಗ ಅತ್ಯಂತ ಸಹಕಾರಿ :...










