ಬೆಂಗಳೂರು : ಕಾಂಗ್ರೆಸ್ ಗೆ ಬೆಲೆ ಎರಿಕೆ ವಿರುದ್ಧ ಪ್ರತಿಭಟನೆ ಮಾಡುವ ನೈತಿಕ ಹಕ್ಕಿಲ್ಲ. ದೇಶದಲ್ಲಿ ಅತಿಹೆಚ್ಚು ಬೆಲೆಯೇರಿಕೆ ಮಾಡಿದ ಖ್ಯಾತಿ, ಕೀರ್ತಿ, ದಾಖಲೆ ಕಾಂಗ್ರೆಸ್ ಹೆಸರಿನಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.
ಆರ್.ಟಿ ನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಈಗಾಗಲೇ 545 ಪಿಎಸ್ ಐ ಹುದ್ದೆಗಳ ನೇಮಕಾತಿ ಅಕ್ರಮ ಸಂಬಂಧ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಆಯ್ಕೆಯಾಗಿರುವ ಅಭ್ಯರ್ಥಿಗಳು ಬಂದು ಮನವಿ ಕೊಟ್ಟಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಕಮಿಟಿ ರಚಿಸಿ, ವರದಿ ಬಂದ ನಂತರ ಪರಾಮರ್ಶಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಮುಸ್ಕಾನ್ ಬಗ್ಗೆ ಅನಂತ್ ಕುಮಾರ್ ಹೆಗಡೆ ಪತ್ರ ಬರೆದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಿಎಂ, ಈ ಬಗ್ಗೆ ಅನಂತಕುಮಾರ್ ಹೆಗಡೆ ಅವರ ಬಳಿ ಚರ್ಚೆ ಮಾಡಿ ಅವರ ಬಳಿ ಇರುವ ಮಾಹಿತಿ ಬಗ್ಗೆ ತಿಳಿದುಕೊಳ್ಳಲಾಗುವುದು. ಅದರ ಆಧಾರದ ಮೇಲೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಕುರಿತು ಯಾವುದೇ ಚರ್ಚೆಯಾಗಿಲ್ಲ. ಅವರು ತಮ್ಮ, ತಂಗಿಯ ಮಗಳ ಮದುವೆಗೆ ಆಹ್ವಾನ ನೀಡಲು ಬಂದಿದ್ದರು. ಜೊತೆಗೆ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಲಾಯಿತು ಎಂದರು.
ಇವತ್ತು ಉಡುಪಿಯಲ್ಲಿ ನಡೆಯಲಿರುವ ಹಲವು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ನಾಳೆ ಮಂಗಳೂರಿನಲ್ಲಿ ಪಕ್ಷದ ಸಂಘಟನಾತ್ಮಕ ಸಭೆಗಳು ಇವೆ. ಏಪ್ರಿಲ್ 13 ರಂದು ಮಧ್ಯಾಹ್ನ ವಾಪಸ್ ಬರುತ್ತೇನೆ ಎಂದರು.










