ಕಾಂಗ್ರೆಸ್ ಮೇಕೆದಾಟು ಪಾದೆಯಾತ್ರೆ – ಹೈಕೋರ್ಟ್ ಕೆಂಡಾಮಂಡಲ…

74
firstsuddi

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯನ್ನು ನಡೆಸುತ್ತಿದೆ. ಈ ಪಾದಯಾತ್ರೆಯಿಂದ ಕೊರೊನಾ ಮತ್ತಷ್ಟು ಹೆಚ್ಚಳವಾಗಲಿದೆ. ಈ ಪಾದಯಾತ್ರೆಯನ್ನು ಕೈಗೊಂಡವರ ವಿರುದ್ಧ ಕ್ರಮಕ್ಕೆ ಆದೇಶ ನೀಡಬೇಕೆಂದು ಕೋರಿ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.

ಕೆಪಿಸಿಸಿ ಪಾದಯಾತ್ರೆಯಿಂದ ಕೊವಿಡ್ ಹಬ್ಬಲಿದೆ. ಸರ್ಕಾರ ಪಾದಯಾತ್ರೆ ತಡೆಗೆ ಕ್ರಮ ಕೈಗೊಂಡಿಲ್ಲ. ಪಾದಯಾತ್ರೆ ಸೂಪರ್ ಸ್ಪ್ರೆಡರ್ ಆಗುವ ಭೀತಿ ಇದೆ. ಹೀಗಾಗಿ ಪಿಐಎಲ್ ತುರ್ತು ವಿಚಾರಣೆ ನಡೆಸಬೇಕು ಎಂದು ವಕೀಲ ಶ್ರೀಧರ್ ಪ್ರಭು ಅವರು ಮನವಿ ಮಾಡಿದ್ದರು.

ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಕೆಂಡಾಮಂಡಲಗೊಂಡಿದೆ. ಕರ್ನಾಟಕ ಈಗಾಗಲೇ ಕೋವಿಡ್ ನಿಂದ ತತ್ತರಿಸುತ್ತಿದೆ. ಹೀಗಿರುವಾಗ ಪಾದಯಾತ್ರೆಗೆ ಹೇಗೆ ಅನುಮತಿ ನೀಡಿದ್ದೀರಿ ಎಂದು ಆರಂಭದಲ್ಲೇ ಪ್ರಶ್ನಿಸಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿತು.

ಅನುಮತಿ ಕೊಟ್ಟಿಲ್ಲದಿದ್ದರೆ ಯಾರಿಗಾಗಿ ಕಾಯುತ್ತಿದ್ದೀರಿ? ಸರ್ಕಾರ ಸಂಪೂರ್ಣ ಅಸಮರ್ಥವಾಗಿದೆಯೇ? ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಿದ್ದರೂ ಅನುಮತಿ ಹೇಗೆ ಸಿಕ್ಕಿತು? ಹೈಕೋರ್ಟ್ ಆದೇಶದವರೆಗೆ ನೀವು ಕ್ರಮ ಕೈಗೊಳ್ಳುವುದಿಲ್ಲವೇ? ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿದೆ. ರ್‍ಯಾಲಿಗೆ ಮುನ್ನ ನೀವು ಅನುಮತಿ ಪಡೆದಿದ್ದೀರ ಎಂದು ಕೆಪಿಸಿಸಿಗೆ ಹೈಕೋರ್ಟ್ ಪ್ರಶ್ನೆ ಮಾಡಿ ಉತ್ತರ ನೀಡುವಂತೆ ಸೂಚಿಸಿದೆ.

ಸರ್ಕಾರದ ಪರವಾಗಿ ಹಾಜರಾದ ಎಎಜಿ, ಈಗಾಗಲೇ ಪಾದಯಾತ್ರೆ ನಡೆಸುವವರ ವಿರುದ್ಧ ಮೂರು ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಕೋವಿಡ್ ಮಾರ್ಗಸೂಚಿಯನ್ನು ಜಾರಿಗೊಳಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ? ಕೋವಿಡ್ ಬಿಗಡಾಯಿಸಿರುವ ವೇಳೆ ಪಾದಯಾತ್ರೆಗೆ ಅವಕಾಶ ಏಕೆ? ಈ ಬಗ್ಗೆ ಉತ್ತರಿಸಲು ಸರ್ಕಾರಕ್ಕೆ ಕೋರ್ಟ್ ತಾಕೀತು ಮಾಡಿದೆ. ಈ ಸಂಬಂಧ ಒಂದು ದಿನ ಅವಕಾಶ ನೀಡಿದ ಹೈಕೋರ್ಟ್ ವಿಚಾರಣೆಯನ್ನು ಜ.14ಕ್ಕೆ ಮುಂದೂಡಿದೆ.