ಕಾಂಗ್ರೆಸ್ ಸರ್ಕಾರದ ಪ್ರತೀ ಸಹಿ ಮಾರಾಟಕ್ಕಿದೆ: ಹೆಚ್.ಡಿ ಕುಮಾರಸ್ವಾಮಿ ಆರೋಪ.

48

ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದ್ದು, ಪ್ರತಿಯೊಂದು ಸಹಿಯನ್ನೂ ಮಾರಾಟಕ್ಕೆ ಇಡಲಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ ಕುಮಾರಸ್ವಾಮಿಯವರು ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಂದಾಯ ಇಲಾಖೆಯಲ್ಲಿ ಉಪವಿಭಾಗಾಧಿಕಾರಿ ಹುದ್ದೆಗೆ ಎಷ್ಟು ದುಡ್ಡು ತೆಗೆದುಕೊಳ್ಳಲಾಗುತ್ತಿದೆ ಎಂಬುದು ಗೊತ್ತಾ, ಎಲ್ಲಾ ಹುದ್ದೆಗಳಿಗೆ ಬೆಲೆ ನಿಗದಿ ಮಾಡಲಾಗಿದೆ. ಸರ್ಕಾರದಲ್ಲಿ ಶೇಕಡ 60 ಕಮಿಷನ್ ನಡೆಯತ್ತಿದೆ ಎಂದು ಕಿಡಿಕಾರಿದರು. ಮಗ ಸೋತಿರುವುದಕ್ಕೆ ಹತಾಶನಾಗಿ ನಾನು ಈ ಆರೋಪ ಮಾಡುತ್ತಿದ್ದೇನೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ. ನಿಮ್ಮ ಕಂದಾಯ ಇಲಾಖೆಯಲ್ಲಿ ಪಡೆಯುತ್ತಿರುವ ಕಮಿಷನ್ ಕುರಿತು ಮಾತನಾಡಿ. ಕಂದಾಯ ಇಲಾಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೇ, ಬೆಂಗಳೂರಿನ ಸಹಾಯಕ ಆಯುಕ್ತ ಹುದ್ದೆಗೆ ಎಷ್ಟು ಹಣವನ್ನು ಪಾವತಿಸಬೇಕು, ನೀವು ಎಷ್ಟು ನಿಗದಿಪಡಿಸಿದ್ದೀರಿ, ಈ ಪಾಲು ಯಾರೆಲ್ಲರಿಗೂ ಸಿಗುತ್ತದೆ, ಕಂದಾಯ ಇಲಾಖೆಯಲ್ಲಿನ ವ್ಯವಸ್ಥೆಯ ಕುರಿತು ನನಗೆ ತಿಳಿದಿದೆ. ಇದಕ್ಕೆ ಬೈರೇಗೌಡ ಉತ್ತರಿಸಲಿ ಎಂದು ಸವಾಲು ಹಾಕಿದರು. ದಲಿತ ಶಾಸಕರ ಡಿನ್ನರ್ ಪಾರ್ಟಿಯ ಬಗ್ಗೆ ಮಾತನಾಡಿ, ಪ.ಜಾತಿ ಮತ್ತು ಪ.ಪಂಗಡಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಿಲ್ಲ. ಡಿನ್ನರ್ ಪಾರ್ಟಿಯಲ್ಲಿ ಚರ್ಚೆಮಾಡುತ್ತಾರಂತೆ. ಹಾಗಿದ್ದಲ್ಲಿ ಸಚಿವ ಸಂಪುಟ ಸಭೆ ಏನುಕ್ಕೆ ಬೇಕು ಎಂದು ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದರು.