ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಬಹಳ ದಿನಗಳಿಂದ ಕೇಳಿಬರುತಿತ್ತು. ಆದರೆ ಇದೀಗ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿಲ್ಲ ಎಂಬ ಸುದ್ದಿ ಇಂದು ಹೊರಬಿದ್ದಿದೆ.
ಈ ಸಂಬಂಧ ಪಕ್ಷದ ಹಿರಿಯ ಮುಖಂಡ ರಂದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದು, ಶ್ರೀ ಪ್ರಶಾಂತ್ ಕಿಶೋರ್ ಅವರೊಂದಿಗೆ ಪ್ರಸ್ತುತ ರಾಜಕೀಯ ಚರ್ಚೆಯ ನಂತರ ಕಾಂಗ್ರೆಸ್ ಅಧ್ಯಕ್ಷರು ಮುಂಬರುವ ಲೋಕಸಭಾ ಚುನಾವಣೆಗೋಸ್ಕರ ‘ಎಂಪವರ್ಡ್ ಆ್ಯಕ್ಷನ್ ಗ್ರೂಪ್ 2024’ ರಚನೆ ಮಾಡಿದ್ದಾರೆ. ನಿರ್ದಿಷ್ಟ ಜವಾಬ್ದಾರಿಯೊಂದಿಗೆ ಆ ಗುಂಪಿನ ಭಾಗವಾಗಲು ಕಿಶೋರ್ ಅವರಿಗೆ ಪಕ್ಷ ಸೇರ್ಪಡೆಗೋಸ್ಕರ ಆಹ್ವಾನ ನೀಡಲಾಗಿತ್ತು. ಆದರೆ, ಅವರು ನಿರಾಕರಿಸಿದರು. ಪಕ್ಷಕ್ಕಾಗಿ ಅವರು ನೀಡಿರುವ ಸಲಹೆಗಳನ್ನು ನಾವು ಪ್ರಶಂಸಿಸುತ್ತೇವೆ ಎಂದಿದ್ದಾರೆ.
ಇನ್ನೂ ಪ್ರಶಾಂತ್ ಕಿಶೋರ್ ಟ್ವಿಟ್ ಮಾಡಿ, ಕಾಂಗ್ರೆಸ್ ಪಕ್ಷ ಸೇರಿಕೊಂಡು ಚುನಾವಣಾ ಜವಾಬ್ದಾರಿ ತೆಗೆದುಕೊಳ್ಳಲು ಕಾಂಗ್ರೆಸ್ ನೀಡಿರುವ ಆಫರ್ ಅನ್ನು ನಾನು ನಿರಾಕರಿಸಿದ್ದೇನೆ. ನಾನು ಕಾಂಗ್ರೆಸ್ ಸೇರ್ಪಡೆಯಾಗುವುದಕ್ಕಿಂತಲೂ ಹೆಚ್ಚಾಗಿ ಆ ಪಕ್ಷದ ನಾಯಕತ್ವದ ಅಗತ್ಯವಿದೆ. ಪರಿವರ್ತನೆಯ ಸುಧಾರಣೆಗಳ ಮೂಲಕ ಕೆಲವು ಆಳವಾದ ಬೇರೂರಿರುವ ರಚನಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಸಾಮೂಹಿಕ ಇಚ್ಛೆಯ ಅಗತ್ಯವಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಹೇಳಿದ್ದಾರೆ.










