ಕಾನೂನು ಉಲ್ಲಂಘನೆ ಮಾಡಲ್ಲ, ಮಡಿಕೇರಿ ಚಲೋ ಮುಂದೂಡಿಕೆ : ಸಿದ್ದರಾಮಯ್ಯ.

70
firstsuddi

ಬೆಂಗಳೂರು : ನಾನೊಬ್ಬ ಮಾಜಿ ಸಿಎಂ ಆಗಿದ್ದು ಕಾನೂನು ಪಾಲನೆ ಮಾಡಲೇಬೇಕು. ಈಗ ಪಕ್ಷದ ನಾಯಕರ ಜೊತೆ ಮಾತನಾಡಿದ್ದೇನೆ. ಮಡಿಕೇರಿ ಚಲೋ ಕಾರ್ಯಕ್ರಮ ಮುಂದೂಡಿದ್ದೇವೆ. ಮುಂದಿನ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದರು.

ತಮ್ಮ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರಕ್ಕೆ ನನ್ನ ಮೇಲೆ ಭಯ ಬಂದಿದೆ. ಹಾಗಾಗಿ ಸಾವರ್ಕರ್ ವಿಚಾರವನ್ನೇ ಮುಂದಿಟ್ಟುಕೊಂಡಿದ್ದಾರೆ. ಸಾಕಷ್ಟು ಬಾರಿ ನಾನು ಕೊಡಗಿಗೆ ಹೋಗಿದ್ದೆ. ಆಗ ಯಾಕೆ ಪ್ರತಿಭಟನೆ ಮಾಡಿಸಲಿಲ್ಲ. ಈಗ ನನ್ನನ್ನು ಹತ್ತಿಕ್ಕಲು ನೋಡುತ್ತಿದ್ದಾರೆ. ಕೊಡಗಿಗೆ ಬರಲಿ ಅಂತ ಭೋಪಯ್ಯ ಸವಾಲು ಹಾಕಿದ್ದಾರೆ. ನಾವು ಸ್ವತಂತ್ರ ಭಾರತದಲ್ಲಿ ಇದ್ದೇವಿ ತಾನೇ?. ರೆಡ್ಡಿ ಬ್ರದರ್ಸ್ ಹೀಗೆ ಸವಾಲು ಹಾಕಿ ಅವರ ಆಟಾಟೋಪದ ವಿರುದ್ಧ ಪಾದಯಾತ್ರೆ ಮಾಡಿದ್ವಿ. ಬಿಜೆಪಿ ಜನಜಾಗೃತಿ ಸಮಾವೇಶ ಮಾಡಲು ಹೊರಟಿದ್ದು ದ್ವೇಷದಿಂದ. ನಾನು ಮಡಿಕೇರಿ ಚಲೋ ಘೋಷಣೆ ಮಾಡಿದ ಬಳಿಕ ಅದರ ಮಾರನೇ ದಿನ ಬಿಜೆಪಿ ಅವರು ಘೋಷಣೆ ಮಾಡಿದ್ರು. ನಮ್ಮ ಮೇಲೆ ಕುಟಿಲ ಪ್ರಯತ್ನ ಮಾಡಿ ಷಡ್ಯಂತ್ರ ಮಾಡಿದ್ದಾರೆ ಎಂದು ಟೀಕಿಸಿದರು.

ನನ್ನ ಮೇಲೆ ಮೊಟ್ಟೆ ಎಸೆದಿದ್ದೇಕೆ?. ನನ್ನ ಮೇಲೆ ಕಲ್ಲು ಎಸೆದಿದ್ದೇಕೆ?. ನಮ್ಮ ಪ್ರತಿಭಟನೆ ತಪ್ಪು ದಾರಿಗೆ ಎಳೆಯೋಕೆ ಮಾಡ್ತಿದ್ದಾರೆ. ಆಗಸ್ಟ್ 26ರಂದು ಪ್ರತಿಭಟನೆ ಕರೆದಿದ್ದೆವು. ಈಗ ಅವರು 144 ಸೆಕ್ಷನ್ ಹಾಕಿದ್ದಾರೆ. ನನ್ನ ಪ್ರತಿಭಟನೆ ತಡೆಯೋಕೆ ಹಾಕಿದ್ದಾರೆ. ನಾನೊಬ್ಬ ಜವಾಬ್ದಾರಿಯುತ ಪ್ರತಿಪಕ್ಷ ನಾಯಕ. ಹಾಗಾಗಿ ನಾನು ಇದನ್ನ ಉಲ್ಲಂಘಿಸೋಕೆ ಆಗಲ್ಲ. ಇವತ್ತು ಅಧ್ಯಕ್ಷರು, ಸ್ನೇಹಿತರ ಜೊತೆ ಚರ್ಚಿಸ್ತೇನೆ. ಡಿಸಿ ಆರ್ಡರ್ ಅಂದ್ರೆ ಗೌರ್ಮೆಂಟ್ ಆರ್ಡರ್. ಅದಕ್ಕೆ ಮಡಿಕೇರಿ ಚಲೋ ಪ್ರತಿಭಟನೆ ಮುಂದೂಡಿದ್ದೇನೆ. ಮುಂದೆ ಎಲ್ಲರ ಜೊತೆ ಚರ್ಚಿಸಿ ನಿರ್ಧಾರ ಮಾಡ್ತೇವೆ ಎಂದು ಹೇಳಿದರು.