ಲಕ್ನೋ : ಕಾನ್ಪುರ ಎನ್ಕೌಂಟರ್ ಪ್ರಕರಣದ ಪ್ರಮುಖ ಆರೋಪಿ ವಿಕಾಸ್ ದುಬೆ ಅವರನ್ನು ಮಧ್ಯಪ್ರದೇಶದ ಉಜ್ಜಯಿನಿಯ ದೇವಾಲಯದಲ್ಲಿ ಬಂಧಿಸಲಾಗಿದೆ. ಮೂಲಗಳ ಪ್ರಕಾರ ವಿಕಾಸ್ ದುಬೆ ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಉಜ್ಜಯಿನಿಯ ದೇವಾಲಯಕ್ಕೆ ತೆರಳಿದ್ದು, ಈ ವೇಳೆ ದೇವಾಲಯದ ಭದ್ರತಾ ಸಿಬ್ಬಂದಿಗಳು ವಿಕಾಸ್ ದುಬೆ ಅವರನ್ನು ಗುರುತಿಸಿ ಸ್ಥಳಿಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಅವರನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 60 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ವಿಕಾಸ್ ದುಬೆ ಅವರನ್ನು ಬಂಧಿಸಲು ಜುಲೈ 2ರಂದು ರಾತ್ರಿ ಪೊಲೀಸರ ತಂಡ ಕಾನ್ಪರದ ದಿಕ್ರು ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ವಿಕಾಸ್ ದುಬೆ ಸಹಚರರು ಪೊಲೀಸರತ್ತ ಗುಂಡಿನ ದಾಳಿ ನಡೆಸಿದ್ದು, ಇದರಲ್ಲಿ 8 ಮಂದಿ ಪೊಲೀಸರು ಹುತಾತ್ಮರಾಗಿದ್ದರು. ಈ ಕೃತ್ಯ ಎಸಗಿದ ವಿಕಾಸ್ ದುಬೆಯ ಸಹಚರರಾದ ಪ್ರೇಮ್ ಪ್ರಕಾಶ್ ಪಾಂಡೆ, ಅತುಲ್ ದುಬೆ, ಅಮೀರ್ ದುಬೆ, ಪ್ರಬಾತ್ ಹಾಗೂ ಬೌನ್ ದುಬೆ ಅವರನ್ನು ಎನ್ಕೌಂಟರ್ ಮಾಡಲಾಗಿದೆ.










