ಉಡುಪಿ : ಇಂದು ಜಿಲ್ಲೆಯ ಕಾಪು ತಾಲೂಕಿನ ಮುಳೂರು ಭಾಗಕ್ಕೆ ಭೇಟಿ ನೀಡಿದ ಸಚಿವೆ ಶೋಭಾ ಕರಂದ್ಲಾಜೆ ಸಮುದ್ರ ಕೊರೆತದಿಂದ ಉಂಟಾದ ನಷ್ಟದ ಕುರಿತು ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ ವಾಡಿಕೆಯಂತೆ ಜೂನ್ ತಿಂಗಳಿನಲ್ಲಿ ನಮಗೆ ಮಳೆಯಾಗಬೇಕು ಆದರೆ ಈ ಬಾರಿ ನಮಗೆ ಮಳೆ ಬಹಳ ತಡವಾಗಿ ಬಂತು. ಆರಂಭದ ಮೊದಲ ಇಪ್ಪತ್ತು ದಿನ ನಮಗೆ ಮಳೆ ಬರಲಿಲ್ಲ ಆದರೆ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಕರಾವಳಿಯಲ್ಲಿ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ. ಸುಮಾರು 6-7 ಮನೆಗಳು ಸಂಪೂರ್ಣ ನಾಶವಾಗಿದ್ದು, 30 ಮನೆಗಳು ಭಾಗಶಃ ನಾಶವಾಗಿದೆ. ಪ್ರತಿ ವರ್ಷದಂತೆ ಸಮುದ್ರ ಕೊರೆತಕ್ಕೆ ಕಲ್ಲು ಹಾಕುವ ಮೂಲಕ ತಡೆಗೋಡೆ ನಿರ್ಮಾಣ ಮಾಡುವ ಕಾರ್ಯ ನಡೆಯುತ್ತದೆ. ಇದಕ್ಕೆ ಶಾಶ್ವತವಾದ ತಡೆಗೋಡೆಯಿಂದ ಮಾತ್ರ ಪರಿಹಾರ ಸಾಧ್ಯ ಎಂದರು.

ಸಿ ಆರ್ ಝಡ್ ಸಮಸ್ಯೆಯಿಂದಾಗಿ ಈ ಕಾರ್ಯ ಬಾಕಿ ಉಳಿದಿದೆ. ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದ್ದು ಶಾಶ್ವತವಾದ ತಡೆಗೋಡೆ ನಿರ್ಮಾಣ ಮಾಡಲು ಒತ್ತಾಯ ಕೂಡ ಮಾಡಲಾಗಿದೆ. ತಡೆಗೋಡೆ ನಿರ್ಮಾಣಕ್ಕೆ ದೊಡ್ಡ ಪ್ರಮಾಣದ ಹಣದ ಅವಶ್ಯಕತೆ ಇದ್ದು ಎಲ್ಲಿ ಅಗತ್ಯವಿದೆ ಎಂದು ನೋಡಿಕೊಂಡು ಮಾಡಲಾಗುತ್ತದೆ. ಯಾವುದೇ ಅಧಿಕಾರಿಗಳು ಈ ವಿಚಾರದಲ್ಲಿ ಕರ್ತವ್ಯಲೋಪ ಮಾಡಿದರೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿದೆ. ಹೆಚ್ಚು ಹೆಚ್ಚು ಬ್ರೇಕ್ ವಾಟರ್ ನಿರ್ಮಾಣದಿಂದ ಸಮುದ್ರ ಕೊರೆತ ತಡೆಯಲು ಸಾಧ್ಯವಿದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅದರ ವಿಚಾರದಲ್ಲಿ ಹೆಚ್ಚಿನ ಗಮನ ನೀಡಲಾಗುವುದು ಎಂದರು.
ಉಡುಪಿ ಜಿಲ್ಲೆಯಲ್ಲಿ ಮಳೆಯಿಂದಾಗಿ 24 ರಿಂದ 30 ಕೋಟಿ ರೂಪಾಯಿಗಳ ನಷ್ಟ ಉಂಟಾಗಿದ್ದು, ಇದಕ್ಕೆ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರೊಂದಿಗೆ ಮಾತನಾಡಲಾಗಿದೆ. ಹಂತ ಹಂತವಾಗಿ ಇದನ್ನು ಬಿಡುಗಡೆ ಮಾಡಲಾಗುವುದು ಎಂಬ ಭರವಸೆಯನ್ನು ಸಚಿವರು ಮತ್ತು ಮುಖ್ಯಮಂತ್ರಿ ನೀಡಿದ್ದಾರೆ ಎಂದರು.










