ಲಕ್ನೋ : 25 ವರ್ಷದ ಯುವಕನೊಬ್ಬ ಕಾಮೋತ್ತೇಜಕ ಮಾತ್ರೆ ಸೇವಿಸಿ ಯುವತಿ ಮೇಲೆ ಅತ್ಯಾಚಾರ ಮಾಡಿದ್ದು, ತೀವ್ರ ರಕ್ತಸ್ರಾವದಿಂದ ಆಕೆ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕೊಲೆ ಹಾಗೂ ಅತ್ಯಾಚಾರ ಆರೋಪದಡಿಯಲ್ಲಿ ಯುವಕನನ್ನು ಬಂಧಿಸಲಾಗಿದೆ.
ಇದೇ ತಿಂಗಳ ನವೆಂಬರ್ 9ರಂದು ಈ ಘಟನೆ ನಡೆದಿದೆ. ಅಂದು ಆರೋಪಿ ಯುವಕ ರಾಜ್ ಬೆಳಗ್ಗೆ 11:32ರ ವೇಳೆಗೆ ತನ್ನ ಹಾಸ್ಟೆಲ್ ನಿಂದ ಹೊರಟು 11:47ಕ್ಕೆ ಹುಡುಗಿ ಮನೆಗೆ ಬಂದಿದ್ದಾನೆ. ಬರುವ ವೇಳೆ ತನ್ನ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಎನರ್ಜಿ ಬೂಸ್ಟರ್ ಮಾತ್ರೆ ಸೇವಿಸಿದ್ದಾನೆ. ನಂತರ ಹುಡುಗಿ ಮನೆಗೆ ಬಂದವನೇ ಆಕೆಯೊಂದಿಗೆ ಲೈಂಗಿಕ ಕ್ರಿಯೆಗೆ ಮುಂದಾಗಿದ್ದಾನೆ. ಆಕೆ ಮೂರ್ಛೆ ಹೋಗುವವರೆಗೂ ಅತ್ಯಾಚಾರ ಮಾಡಿದ್ದಾನೆ. ಇದರಿಂದ ಆಕೆಯ ಖಾಸಗಿ ಭಾಗದಲ್ಲಿ ರಕ್ತಸ್ರಾವವಾಗಿದೆ. ಇದನ್ನು ನೋಡಿದ ರಾಜ್ ಹೆದರಿ ಅಲ್ಲಿಂದ ಓಡಿಹೋಗಿದ್ದಾನೆ.
ಆಕೆಯ ಕಿರಿಯ ಸಹೋದರಿ ಮನೆಗೆ ಹಿಂತಿರುಗಿದಾಗ ಸಂತ್ರಸ್ತೆ ಹಾಸಿಗೆ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಿದ್ದಾಳೆ. ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ತಪಾಸಣೆ ನಡೆಸಿದ ಬಳಿಕ ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ದೃಢಪಟ್ಟಿದೆ. ಅಲ್ಲದೆ ಆಕೆಯ ಖಾಸಗಿ ಭಾಗಗಳಲ್ಲಿ ಉಂಟಾಗಿದ್ದ ಗಂಭೀರ ಗಾಯಗಳಿಂದಲೇ ಅತಿಯಾದ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಾದ ನಂತರ ಸಂತ್ರಸ್ತ ಹುಡುಗಿಯ ಕುಟುಂಬವು, ನೆರೆಹೊರೆಯವರು ಹಾಗೂ 65 ವರ್ಷದ ಮಹಿಳೆಯೊಬ್ಬರು ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಲಿಖಿತ ದೂರು ನೀಡಿದ್ದರು. ದೂರನ್ನು ಆಧರಿಸಿ ಪೊಲೀಸ್ ನೆರೆಹೊರೆಯವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು. ಆದರೆ ಹುಡುಗಿಯ ಮೊಬೈಲ್ ಡೇಟಾ ಪರಿಶೀಲಿಸಿದಾಗ ಕೊಲೆಗೆ ರಾಜ್ ಕಾರಣ ಎಂಬುದು ಪತ್ತೆಯಾಗಿದೆ.
ಬಳಿಕ ಪೊಲೀಸರು ಆರೋಪಿ ರಾಜ್ ಬರನ್ ಅಲಿಯಾಸ್ ರಾಜ್ ಗೌತಮ್ ನನ್ನು ಹಾಸ್ಟೆಲ್ನಿಂದ ಕರೆದುಕೊಂಡು ಬಂದಿದ್ದಾರೆ. ಆರೋಪಿ, ತಾನು ಮೃತ ಹುಡುಗಿಯನ್ನು ಪ್ರೀತಿಸುತ್ತಿದ್ದು, ಇಬ್ಬರ ನಡುವೆ ಸಂಬಂಧವಿತ್ತೆಂದು ಒಪ್ಪಿಕೊಂಡಿದ್ದಾನೆ. ಆಕೆ ಒಬ್ಬಳೆ ಇದ್ದಾಳೆ ಎಂದು ತಿಳಿಸಿದ ಬಳಿಕವೇ ನಾನು ಆಕೆಯ ಮನೆಗೆ ಹೋದೆ. ನಂತರ ಲೈಂಗಿಕ ಕ್ರಿಯೆಗೆ ಮುಂದಾದೆವು. ಆದರೆ ಸಂಭೋಗದ ಸಮಯದಲ್ಲೇ ಹುಡುಗಿಗೆ ವಿಪರೀತ ರಕ್ತಸ್ರಾವ ಪ್ರಾರಂಭವಾಯಿತು. ಆಕೆ ಪ್ರಜ್ಞೆ ಕಳೆದುಕೊಂಡಳು. ನಂತರ ಆಕೆಗೆ ಔಷಧ ಪಡೆಯಲು ಮೆಡಿಕಲ್ ಶಾಪ್ ಗೆ ಹೋದೆನು. ಆದರೆ ಅವರು ರೋಗ ನಿರ್ಣಯಕ್ಕಾಗಿ ಆಕೆಯನ್ನು ಕರೆತರಲೇಬೇಕು ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಾಜ್ ಮೊಬೈಲ್ ಪರಿಶೀಲಿಸಿದಾಗ ಮೃತ ಹುಡುಗಿಯ ಹೊರತಾಗಿ ಇತರ ಹುಡುಗಿಯರೊಂದಿಗೂ ಚಾಟ್ ಮಾಡಿರುವುದು ಪತ್ತೆಯಾಗಿವೆ. ನಾವು ಎಲ್ಲಾ ಸಾಂದರ್ಭಿಕ ಸಾಕ್ಷ್ಯಗಳನ್ನು ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.










