ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಬೇಕು : ಡಾ|| ಮೋಹನ್ ಕುಮಾರ್.

117
firstsuddi

ಚಿಕ್ಕಮಗಳೂರು : ಮಾನಸಿಕ ಮತ್ತು ದೈಹಿಕವಾಗಿ ಸಧೃಡರಾಗುವ ನಿಟ್ಟಿನಲ್ಲಿ ಮಕ್ಕಳು ತಪ್ಪದೇ ಪ್ರತಿದಿನ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಬೇಕು ಎಂದು ಜಿಲ್ಲಾ ಸರ್ಜನ್ ಡಾ|| ಮೋಹನ್ ಕುಮಾರ್ ಸಲಹೆ ನೀಡಿದರು.

ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಇಂದು ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ನಾಗರೀಕರಾಗಲು ಶಿಕ್ಷಣ ಅಗತ್ಯ, ಆರೋಗ್ಯವಂತರಾಗಿ ಬದುಕಲು ಕ್ರೀಡಾ ಚಟುವಟಿಕೆ, ವ್ಯಾಯಾಮ ಅತ್ಯಗತ್ಯ ಹಾಗಾಗಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದರು.

ಕ್ರೀಡಾ ಚಟುವಟಿಗಳಲ್ಲಿ ತೊಡಗುವುದರಿಂದ ವ್ಯಾಯಾಮ ಮಾಡುವುದರಿಂದ, ಸ್ವಚ್ಚವಾಗಿರುವುದರಿಂದ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಮಾನಸಿಕ ಮತ್ತು ದೈಹಿಕವಾಗಿ ಸಧೃಡರಾಗಬಹುದು, ಸಾಂಕ್ರಾಮಿಕ ರೋಗಗಳಿಂದ ದೂರವಿರಬಹುದು ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ಹಣ್ಣು, ತರಕಾರಿ ಸೇರಿದಂತೆ ಪೌಷ್ಠಿಕ ಆಹಾರಗಳನ್ನು ಸೇವಿಸಬೇಕು, ಕೋವಿಡ್ ವ್ಯಾಕ್ಸಿನ್ ತಪ್ಪದೇ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ಮಾತನಾಡಿ ಮಕ್ಕಳು ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು, ಪರಿಸರವನ್ನು ಸ್ವಚ್ಚವಾಗಿಡಲು ಮುಂದಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಎಸ್.ಈ.ಲೋಕೇಶ್ವರಾಚಾರ್ ಶಾಲೆಯಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಜೊತೆಗೆ ವಿದ್ಯಾರ್ಥಿಗಳ ಆರೋಗ್ಯಕ್ಕೂ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಮಕ್ಕಳ ದಿನಾಚರಣೆ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು, ರೌಂಡ್ ಟೇಬಲ್ ಸಂಸ್ಥೆ ಹಾಗೂ ದೇವಿ ಸ್ಟೋರ್ಸ್ ವತಿಯಿಂದ ಮಕ್ಕಳಿಗೆ ಸಿಹಿ ಮತ್ತು ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಪಶು ವೈದ್ಯ ಇಲಾಖೆಯ ನಿವೃತ್ತ ಅಧಿಕಾರಿ ರಾಮಚಂದ್ರಮೂರ್ತಿ ಶಿಕ್ಷಕಿ ನಾಗವೇಣಿ ಉಪಸ್ಥಿತರಿದ್ದರು.