ಕಾರವಾರ : ಮೀನುಗಾರಿಕೆಗೆ ಇಲ್ಲಿನ ಬೈತಖೋಲ್ ಬಂದರಿನಿಂದ ತೆರಳಿದ್ದ ಸುಮಾರು 15 ದೋಣಿಗಳಿಗೆ, ತಿನ್ನಲು ಯೋಗ್ಯವಲ್ಲದ ‘ಕಾರ್ಗಿಲ್’ (ಕಡಬು) ಮೀನು ಹೇರಳವಾಗಿ ಬಲೆಗೆ ಬಿದ್ದಿದ್ದು, ಪ್ರತಿ ದೋಣಿಯಲ್ಲಿ ಐದರಿಂದ ಆರು ಟನ್ಗಳಷ್ಟು ಮೀನು ಸಿಕ್ಕಿದ್ದು, ಇದು ವಿಪರೀತ ವಾಸನೆ ಹೊಂದಿದ್ದು, ಕಪ್ಪು ಬಣ್ಣದಿಂದ ಕೂಡಿದ್ದು, ಈ ಮೀನುಗಳನ್ನು ಬೇರೆ ಮೀನುಗಳ ಜೊತೆಗೆ ಸೇರಿಸಿ ತಂದರೆ, ಬೇರೆ ಮೀನುಗಳ ಬಣ್ಣ ಹಾಗೂ ರುಚಿ ಕಳೆದುಕೊಳ್ಳುತ್ತವೆ. ದುಬಾರಿ ಡೀಸೆಲ್ ವೆಚ್ಚ ಮಾಡಿಕೊಂಡು ಮೀನುಗಾರಿಕೆಗೆ ಹೋದವರು, ಖಾಲಿ ದೋಣಿಯಲ್ಲಿ ವಾಪಸ್ ಬರಬಾರದೆಂದು ಬಲೆಗೆ ಸಿಕ್ಕ ಈ ಮೀನನ್ನು ಜತೆಗೆ ಬಂದರಿಗೆ ತಂದಿದ್ದಾರೆ.
ಫಿಶ್ಮಿಲ್ಗೆ ಸಾಗಾಟ: ‘ಈ ಮೀನನ್ನು ಯಾರೂ ತಿನ್ನುವುದಿಲ್ಲ. ಹೀಗಾಗಿ ಇವುಗಳನ್ನು ಫಿಶ್ಮಿಲ್ಗೆ ಕಳುಹಿಸಿಕೊಡಲಾಗುತ್ತದೆ. ನಮ್ಮಲ್ಲಿ ಫಿಶ್ಮಿಲ್ ಇಲ್ಲದ ಕಾರಣ, ಉಡುಪಿ, ಕುಂದಾಪುರ, ಗೋವಾದ ಕಾನಕೋಣ, ಮಹಾರಾಷ್ಟ್ರದ ರತ್ನಗಿರಿಗೆ ಸಾಗಾಟ ಮಾಡುತ್ತೇವೆ. ಅಲ್ಲಿಯೂ ಹೆಚ್ಚಿನ ದರವಿರುವುದಿಲ್ಲ. ಕಿಲೋಗೆ 10 ರೂ ಇಂದ 15 ರೂ ರಷ್ಟು ಇದ್ದು, ನಷ್ಟದಲ್ಲಿರುವ ಮೀನುಗಾರರಿಗೆ ಸದ್ಯ ಇದೇ ಆದಾಯವಾಗಿದೆ’ ಎನ್ನುತ್ತಾರೆ ಮೀನುಗಾರ ವಿನಾಯಕ ಹರಿಕಂತ್ರ. ‘ಎರಡು ವರ್ಷಗಳ ಹಿಂದೆ ಈ ಮೀನು ಇಲ್ಲಿನ ಮೀನುಗಾರರಿಗೆ ದೊರೆತಿತ್ತು. ಆದರೆ, ಇಷ್ಟು ಪ್ರಮಾಣ ದಲ್ಲಿ ಸಿಕ್ಕಿರಲಿಲ್ಲ. ಈ ಬಾರಿ ಒಟ್ಟು 80 ಟನ್ನಷ್ಟು ಬೈತಖೋಲ್ ಬಂದರಿಗೆ ಬಂದಿದೆ. ಇದು ಈ ವರ್ಷ ಮೀನುಗಾರಿಕೆಗೆ ಹಿನ್ನಡೆಯ ಸೂಚನೆ’ ಎಂಬ ಆತಂಕ ಅವರದ್ದು.
ಮೀನುಗಳು ದೊರೆಯದಿರಲು ಕಾರಣವೇ ಇವು: ‘ಕಾರ್ಗಿಲ್’ ಮೀನು ಹೆಚ್ಚಾಗಿ ಹವಳದ ದಿಬ್ಬಗಳು ಇರುವಲ್ಲಿ, ಲಕ್ಷದ್ವೀಪದಂಥ ಪ್ರದೇಶಗಳಲ್ಲಿ ಇರುತ್ತವೆ. ಕಳೆದ ತಿಂಗಳು ಮುಂಬೈನಲ್ಲಿ ಈ ಮೀನು ಅಪಾರವಾಗಿ ದೊರೆತಿತ್ತು ಎನ್ನುತ್ತಾರೆ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ. ಅದನ್ನು ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ. ಅವರ ಪ್ರಕಾರ, ಸಮುದ್ರದಲ್ಲಿ ನೀರಿನ ಚಲನೆ ಬದಲಾಗುತ್ತಿದೆ. ಹೀಗಾಗಿ ಈ ಮೀನು ಹಿಂಡು ಹಿಂಡಾಗಿ ಉತ್ತರ ದಿಕ್ಕಿನಲ್ಲಿ ಚಲಿಸುತ್ತಿವೆ. ಇವುಗಳಿಗೆ ಮನುಷ್ಯರಂತೆ ಹಲ್ಲುಗಳಿದ್ದು, ಇತರ ಮೀನುಗಳನ್ನು ತಿನ್ನುತ್ತವೆ. ಇದರಿಂದ ಮೀನುಗಾರಿಕೆಗೆ ಹಿನ್ನಡೆ ಉಂಟಾಗುತ್ತದೆ. ಸೌಂದಳೆ ಹಾಗೂ ಬಂಗುಡೆಯಂಥ ಮೀನುಗಳು ಇತ್ತೀಚಿಗೆ ಹೆಚ್ಚಿನ ಪ್ರಮಾಣದಲ್ಲಿ ದೊರೆಯದಿರುವುದಕ್ಕೆ ಕಾರಣವೇ ಈ ಮೀನುಗಳು ಎಂದು ಮಾಹಿತಿ ನೀಡಿದರು.










