ಕಾರು ಅಪಘಾತದಲ್ಲಿ ಮಹಿಳೆ ಸಾವು- ನಟ ನಾಗಭೂಷಣ್ ಪೊಲೀಸ್ ವಶಕ್ಕೆ…

63
firstsuddi

ಕಾರು ಅಪಘಾತದಲ್ಲಿ ಮಹಿಳೆಯೊಬ್ಬರ ಸಾವಿಗೆ ಕಾರಣರಾದ ನಟ ನಾಗಭೂಷಣ್ ಅವರನ್ನು ಕುಮಾರಸ್ವಾಮಿ ಲೇಔಟ್
ಪೊಲೀಸರು ಬಂಧಿಸಿದ್ದಾರೆ.

ಕನ್ನಡದ ಹೆಸರಾಂತ ನಟ ನಾಗಭೂಷಣ್ ಕಾರು ಅಪಘಾತವಾಗಿದ್ದು, ಬೆಂಗಳೂರಿನ ವಸಂತಪುರದ ನಿವಾಸಿ 48ರ ವಯಸ್ಸಿನ ಪ್ರೇಮಾ ಎನ್ನುವವರು ಸಾವನ್ನಪ್ಪಿದ್ದಾರೆ. ನಿನ್ನೆ ತಡರಾತ್ರಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ರಾತ್ರಿ ಒಂಬತ್ತು ಗಂಟೆಗೆ ನಾಗಭೂಷಣ್ ತಮ್ಮ ಮನೆಗೆ ತೆರಳುವಾಗ ಅಪಘಾತವಾಗಿದೆ ಎಂದು ತಿಳಿದು ಬಂದಿದೆ.

ಶೂಟಿಂಗ್ ಮುಗಿಸಿಕೊಂಡು ನಾಗಭೂಷಣ್ ಬರುವಾಗ ರಸ್ತೆಯಲ್ಲಿ ಅಡ್ಡಬಂದ ಪಾದಚಾರಿ ದಂಪತಿಗಳಾದ ಪ್ರೇಮಾ ಮತ್ತು ಕೃಷ್ಣ ಅವರಿಗೆ ಕಾರು ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ದಂಪತಿಗಳಿಬ್ಬರಿಗೂ ತೀವ್ರ ಗಾಯವಾಗಿದ್ದು, ಗಾಯಾಳುಗಳನ್ನು ಖುದ್ದಾಗಿ ನಾಗಭೂಷಣ್ ಅವರೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ. ಪ್ರೇಮಾ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಪತಿ ಕೃಷ್ಣ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಾಗಭೂಷಣ್ ಅವರೇ ಸ್ವತಃ ಕಾರನ್ನು ಚಲಾಯಿಸುತ್ತಿದ್ದರಿಂದ ಅವರನ್ನು ಪೊಲೀಸರು ವಶಪಡಿಸಿಕೊಂಡಿದ್ದು ಮಾಹಿತಿ ಪಡೆಯುತ್ತಿದ್ದಾರೆ. ಮುಂದಿನ ವಿಚಾರಣೆ ಪ್ರಕ್ರಿಯೆ ನಡೆಯುತ್ತಿದೆ. ನಾಗಭೂಷಣ್ ಅವರನ್ನು ಸ್ಟೇಷನ್ ಬೇಲ್ ನೀಡಿ ಕಳುಸಲಾಗಿದೆ. ಮುಂದಿನ ವಿಚಾರಣೆಗೆ ಮಂಗಳವಾರ ಠಾಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅತಿ ವೇಗ ಅಪಘಾತಕ್ಕೆ ಕಾರಣವಾಗಿದೆ. ರಾತ್ರಿಯೇ ಆಲ್ಕೊಹಾಲ್ ಟೆಸ್ಟಿಂಗ್ ನಡೆಸಿದ್ದು, ಮೀಟರ್‌ನಲ್ಲಿ ಕುಡಿದಿಲ್ಲ ಎಂಬುದು ಪತ್ತೆಯಾಗಿದೆ.

ಮೃತರ ಪುತ್ರನು, ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದು, ಫುಟ್ ಪಾತ್ ಮೇಲೆ ತಂದೆ ತಾಯಿ ವಾಕ್ ಮಾಡುವಾಗ ಕಾರು ಹಾಯ್ದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.