ಕಿರುಗುಂದ ಗ್ರಾಮ ಪಂಚಾಯಿತಿ ಅವ್ಯವಹಾರ: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಅವರಿಂದ ಸಿಇಒಗೆ ದೂರು.

1607
ಮೂಡಿಗೆರೆ : ಮೂಡಿಗೆರೆ ತಾಲೂಕು ಸೇರಿದಂತೆ ಕಿರಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿ-ಹಳ್ಳಿಗಳು, ಮನೆ-ಮನೆಗಳಲ್ಲಿ ಒಂದೇ ಚರ್ಚೆ. ಕಿರಗುಂದ ಗ್ರಾಮ ಪಂಚಾಯಿತಿಯಲ್ಲಿ ಬಡವರ ಹೆಸರಲ್ಲಿ ಸುಮಾರು 15ಲಕ್ಷ ಗುಳುಂ ಆಗಿದೆ ಅನ್ನೋದು. ಇದು ಎಷ್ಟರ ಮಟ್ಟಿಗಿನ ಸತ್ಯ ಅನ್ನೊದು ಎರಡನೇ ಮಾತು. ಆದರೆ, ಬೆಂಕಿ ಇಲ್ಲದೆ ಹೊಗೆಯಾಡಲ್ಲ ಎಂಬಂತೆ ಊರಿನ ತುಂಬಾ ಇದೇ ವಿಷಯ ಬಿಸಿ-ಬಿಸಿ ಚರ್ಚೆಯಾಗಿದೆ. ಇಂದು ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷ ಈ ಬಿ.ಕೆ. ಚಂದ್ರಶೇಖರ್ ಈ ಗಂಭೀರ ಆರೋಪ ಮಾಡಿದ್ದಾರೆ. ಉಪಾಧ್ಯಕ್ಷರೇ ಮಾಡಿದ ಈ ಆರೋಪ ಈಗ ತಾಲೂಕಿನಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸೂಕ್ತ ತನಿಖೆಯಾಗಬೇಕು, ತಪಿತಸ್ಥರಿಗೆ ಶಿಕ್ಷೆಯಾಗಬೇಕು ಅಂತಿದ್ದಾರೆ ಗ್ರಾಮಸ್ಥರು.
ಆಗಿರೋ ಭ್ರಷ್ಟಾಚಾರ ಏನು ಅಂತ ಕೇಳಲು ಹೋದ್ರೆ ಒಂದೋ ಎರಡೋ. ಗ್ರಾಮ ಪಂಚಾಯಿತಿ ಹಣದಲ್ಲಿ ತಮ್ಮ ಮನೆಗೆ ರಸ್ತೆ ನಿರ್ಮಿಸಿಕೊಂಡಿರೋ ಸದಸ್ಯರು ಒಂದೆಡೆಯಾದ್ರೆ, ಸಾರ್ವಜನಿಕರ ಉಪಯೋಗಕ್ಕಾಗಿ ಇರಬೇಕಾದ ನೀರಿನ ಟ್ಯಾಂಕರ್‍ಗಳನ್ನ ತಮ್ಮ ತೋಟಕ್ಕೆ ಹಾಕಿಕೊಂಡಿರೋ ಪುಣ್ಯಾತ್ಮರು ಮತ್ತೊಂದೆಡೆ. ಪರಿಶಿಷ್ಟ ವರ್ಗದ ಜನರಿಗೆ ಮಂಜೂರಾಗಿದ್ದ ಸುಮಾರು ಎರಡು ಲಕ್ಷ ಮೌಲ್ಯದ ವಿದ್ಯುತ್ ಕಂಬಗಳಿಂದ ತಮ್ಮ ಮನೆಗೆ ಬೆಳಕು ಮಾಡಿಕೊಂಡಿರೋ ಕಲಾಕಾರರು ಮಗದೊಡೆ. ಪಂಚಾಯಿತಿಗೆ ಸೇರಿದ ಸುಮಾರು ಒಂದೂವರೆ ಲಕ್ಷ ಹಣ ತಮ್ಮ ಬಳಿಯೇ ಇಟ್ಟುಕೊಂಡಿರೋ ಪುಣ್ಯಾತ್ಮರು ಇನ್ನೊಂದೆಡೆ. ಈ ಗ್ರಾಮ ಪಂಚಾಯಿತಿಯಲ್ಲಿ ಬಡವರಿಗೆ ಮಂಜೂರಾದ ಮನೆಗಳನ್ನ ಶ್ರೀಮಂತರಿಗೆ ಕೊಡೋ ದಾನಿಗಳು ಇದ್ದಾರೆ, ಮನೆ ಇದ್ದವರಿಗೆ ಮತ್ತೊಂದು-ಮಗದೊಂದು ಹಂಚೋ ಕರ್ಣನ ವಂಶಸ್ಥರು ಇದ್ದಾರೆ ಅಂತಾರೆ ಸ್ಥಳಿಯರು. ಇವರೆಲ್ಲಾ ಜನಸೇವೆಗೆ ಬಂದದ್ದು ಇದಕ್ಕೇನಾ ಅಂತಿದ್ದಾರೆ ಗ್ರಾಮದ ಜನ. 
ಊರಲ್ಲಾಗ್ತಿರೋ ಅನ್ಯಾಯ ಕಂಡ ಹಿರಿಯ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಇದು ನನ್ನ ಊರಿನ ಕಥೆ. ಗ್ರಾಮ ಪಂಚಾಯಿತಿಯ ಅನ್ಯಾಯ-ಅವ್ಯವಹಾರಗಳು ಸಾಮಾಜಿಕ ಜಾಲತಾಣದಲ್ಲಿ ನನ್ನ ಗಮನಕ್ಕೆ ಬಂದಿವೆ. ದಯವಿಟ್ಟೂ ಸೂಕ್ತ ತನಿಖೆ ನಡೆಸಿ ಎಂದು ಜಿಲ್ಲಾ ಪಂಚಾಯಿತಿ ಸಿಇಓಗೆ ದೂರು ನೀಡಿದ್ದಾರೆ. ಈ ಬಗ್ಗೆ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಸುನಿಲ್ ಹೆಗ್ಗರವಳ್ಳಿ, ಜನ ಈಗಾಗಲೇ ಮಳೆಯಿಂದ ನೊಂದು-ಬೆಂದು ಎಲ್ಲಾ ಕಳೆದುಕೊಂಡು ಹೈರಾಣಾಗಿದ್ದಾರೆ. ಒಂದೊಂದು ರೂಪಾಯಿ ಹಣ ಹಾಗೂ ಒಂದೊಂದು ಸೌಲಭ್ಯ ಕೂಡ ಅವರಿಗೆ ಬದುಕುವ ಆಸೆ ತರುತ್ತೆ. ಇಂಥಾ ಸಂದರ್ಭದಲ್ಲೂ ಜನಸೇವೆ ಹೆಸರಲ್ಲಿ ಬಡವರಿಗೆ ಹೀಗೆ ಅನ್ಯಾಯ ಮಾಡ್ತಿರೋದು ನಿಜಕ್ಕೂ ದುರಂತ ಎಂದು ಬೇಸರದ ಮಾತುಗಳನ್ನಾಡಿ ಬಡವರಿಗೆ ಮೋಸ ಮಾಡುವಂತಹಾ ತಪ್ಪನ್ನ ಯಾರೇ ಮಾಡಲಿ, ಅವರಿಗೆ ಸೂಕ್ತ ಶಿಕ್ಷೆಯಾಗಬೇಕೆಂದು ನನ್ನ ಬಯಕೆ ಎಂದಿದ್ದಾರೆ. 
ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷರೇ ಮಾಡಿದ ಆರೋಪಕ್ಕೆ ಜನ ಅವರ ಬೆನ್ನಿಗೆ ನಿಂತಿದ್ದಾರೆ. ಹೊರಗಿರೋ ನಮಗೆ ಗೊತ್ತಾಗಲ್ಲ. ಒಳಗೇ ಇರೋ ಚಂದ್ರಶೇಖರ್‍ಗೆ ಅಲ್ಲಿನವರ ತಂತ್ರ-ಕುತಂತ್ರ ಗೊತ್ತಿರುತ್ತೆ, ಬೆಂಕಿ ಇಲ್ಲದೆ ಹೊಗೆಯಾಡಲ್ಲ ಎಂದು ಜನ ಕೂಡ ಸೂಕ್ತ ತನಿಖೆ ಆಗ್ರಹಿಸಿದ್ದಾರೆ. ದೂರು ಪಡೆದಿರೋ ಸಿಇಓ ಕೂಡ ಕೂಡಲೇ ಇತ್ತ ಗಮನ ಹರಿಸಿ ಇಲ್ಲಿ ತಪ್ಪುಗಳು ನಡೆದಿದ್ದು ಬಡವರ ಹೆಸರಲ್ಲಿ ಬಡವರಿಗೆ ಉಂಡೇ ನಾಮ ಹಾಕಿದ್ರೆ ಅಂತಹ ಸದಸ್ಯರ ವಿರುದ್ಧ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಬೇಕೆಂದು ಜನ ಕೂಡ ಆಗ್ರಹಿಸಿದ್ದಾರೆ.