ಕುಂದಾಪುರ: ಕೊರೋನಾ ಮಹಾಮಾರಿ ನಿಯಂತ್ರಕ್ಕಾಗಿ ವಿಧಿಸಿರುವ ಕರ್ಫ್ಯೂವನ್ನು ಉಲ್ಲಂಘಿಸಿದ್ದಲ್ಲದೆ ಪೊಲೀಸರ ಮಾತಿಗೆ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಕುಂದಾಪುರದ ಎಂಜಿನಿಯರಿಂಗ್ ಪಧವೀಧರ ಯುವಕನ ಮೇಲೆ ಕುಂದಾಪುರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಕುಂದಾಪುರ ಉಪವಿಭಾಗಾಧಿಕಾರಿ ರಾಜು ಹಾಗೂ ಕುಂದಾಪುರ ಠಾಣಾಧಿಕಾರಿ ಹರೀಶ್ ನಾಯ್ಕ್ ನೇತೃತ್ವದ ತಂಡ ಕುಂದಾಪುರದ ಚೆಕ್ ಪೋಸ್ಟಿನಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ವೇಳೆ ಬೈಕಿನಲ್ಲಿ ಬಂದ ಉಪ್ಪಿನಕುದ್ರು ನಿವಾಸಿ ವಿಶ್ವನಾಥ್ (23) ಪೊಲೀಸರು ಕೊಟ್ಟ ಎಚ್ಚರಿಕೆಗೆ ಕ್ಯಾರೆ ಅನ್ನದೆ ಅವರೊಂದಿಗೆ ವಾಗ್ವದ ನಡೆಸಿದ್ದಾನೆ.
ಈ ವೇಳೆ ಕುಂದಾಪುರ ಠಾಣಾಧಿಕಾರಿಗಳು ಅವನಿಗೆ ಬುದ್ದಿ ಹೇಳುತ್ತಿದ್ದರೆ ಯುವಕ ಕೂಡಲೇ ಡಿಸಿಗೆ ಕರೆ ಮಾಡುತ್ತೇನೆಂದು ಫೋನ್ ತೆಗೆದು ಪೊಲೀಸರೊಂದಿಗೆ ತಗಾದೆ ಎತ್ತಿದ ಯುವಕನ ನಡೆ ಪಿಎಸ್ಐ ಹರೀಶ್ ಆರ್ ನಾಯ್ಕ್ ಅವರ ಆಕ್ರೋಶಕ್ಕೆ ಕಾರಣವಾಯಿತು. ನಾವಿಲ್ಲಿ ಕತ್ತೆ ಕಾಯಲಿಕ್ಕೆ ನಿಂತಿದ್ದೇವಾ? ಹಗಲು ರಾತ್ರಿ ನಿಮ್ಮ ಆರೋಗ್ಯಕ್ಕಾಗಿ ನಿದ್ದೆ ಬಿಟ್ಟು ಕರ್ತವ್ಯ ಮಾಡುತ್ತಿದ್ದೇವೆ ಎಂದು ಲಾಠಿ ಮೂಲಕ ಹೊಡೆಯಲು ಮುಂದಾದರು. ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳದಲ್ಲಿ ಓಡಾಡೋದು ಎಷ್ಟರಮಟ್ಟಿಗೆ ಸರಿ? ಮಾಸ್ಕ್ ಇಲ್ಲದಿದ್ದರೆ ಕರ್ಚೀಫ್ ಇಲ್ಲವಾ ಎಂದಾಗ ಕರ್ಚೀಫ್ ಇಲ್ಲ. ಕರ್ಚೀಫ್ ತೆದೆಕೊಳ್ಳಲು ಹಣವಿಲ್ಲ ಎಂದು ಉಡಾಫೆ ಮಾತನಾಡಿದ ಯುವಕ ಮಾತಿಗೆ ಮತ್ತೆ ರೊಚ್ಚಿಗೆದ್ದ ಪಿಎಸ್ಐ ಮತ್ತೆ ಹೊಡೆಯಲಾರಂಭಿಸಿದರು.
ಈ ವೇಳೆಯಲ್ಲಿ ಅಲ್ಲೇ ಸ್ಥಳದಲ್ಲಿದ್ದ ಎಸಿ ರಾಜು ಕೆ ಆತನ ಮೇಲೆ ಕೇಸು ಜಡಿದು ಒದ್ದು ಒಳಗೆ ಹಾಕಿ ಅನ್ನುತ್ತಿಂದ್ದಂತೆಯೇ ಯುವಕನನ್ನು ಪೊಲೀಸರು ಜೀಪಿನಲ್ಲಿ ಕೂರಿಸಿ ಠಾಣೆಗೆ ಕರೆದುಕೊಂಡು ಹೋದರು. ಯುವಕನ ಮೇಲೆ ಕುಂದಾಪುರ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 269, 353 ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.










