ಕಲಬುರಗಿ : ಪತ್ನಿ ಶೀಲ ಶಂಕಿಸಿ ತಂದೆಯೋರ್ವ ಕುಡಿದ ಮತ್ತಿನಲ್ಲಿ ತನ್ನ ಇಬ್ಬರು ಪುಟ್ಟ ಹೆಣ್ಣು ಮಕ್ಕಳಿಗೆ ವಿಷ ಕುಡಿಸಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ನಡೆದಿದೆ. ರೋಹಿತಾ(4) ಹಾಗೂ ಪರ್ವಿತಾ(3) ತಂದೆಯಿಂದಲೇ ಹತ್ಯೆಯಾದ ಮಕ್ಕಳು ಎಂದು ಗುರುತಿಸಲಾಗಿದ್ದು, ಸಂಜೀವ್ ಮಕ್ಕಳನ್ನು ಹತ್ಯೆಗೈದ ಪಾಪಿ ತಂದೆ. ಹೈದರಾಬಾದ್‍ನಲ್ಲಿ ಕೆಲಸ ಮಾಡುತ್ತಿದ್ದ ಸಂಜು ಅವರು ಕಳೆದ ಕೆಲವು ದಿನಗಳ ಹಿಂದೆ ತಮ್ಮ ತಾಂಡಾಕ್ಕೆ ಬಂದಿದ್ದು, ಮಧ್ಯ ವ್ಯಸನಿಯಾಗಿರುವ ಇವರು ಪತ್ನಿಗೆ ತಿಳಿಯದಂತೆ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಹೊಲಕ್ಕೆ ಕರೆದೊಯ್ದು ವಿಷ ಕುಡಿಸಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದ್ದು, ಬಳಿಕ ಜಮೀನಿನಲ್ಲಿಯೇ ತಾನು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಜಮೀನಿನಲ್ಲಿ ಸಂಜೀವ್ ನರಳಾಡುತ್ತಿದ್ದನ್ನು ನೋಡಿದ ಗ್ರಾಮಸ್ಥರು ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸಿದರು. ಆದರೆ ಮಕ್ಕಳು ಮಾತ್ರ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಖೀರುನಾಯಕ ಎಂಬುವವರ ಹೊಲದಲ್ಲಿ ಇಬ್ಬರು ಹೆಣ್ಣು ಮಕ್ಕಳ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಮಿರಿಯಾಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ತಂದೆ ಚೇತರಿಸಿಕೊಂಡ ಬಳಿಕ ಪೊಲೀಸರು ಆತನನ್ನು ಬಂಧಿಸಲಿದ್ದಾರೆ ಎನ್ನಲಾಗಿದೆ.










