ಅಥಣಿ : ಕೃಷ್ಣಾ ನದಿ ನೀರು ಪಾಲಾಗಿದ್ದ ಒಂದೇ ಕುಟುಂಬದ ನಾಲ್ವರು ಸಹೋದರರ ಶವಗಳು ಪತ್ತೆಯಾಗಿವೆ. ನಿನ್ನೆ ಓರ್ವನ ಶವ ಪತ್ತೆಯಾಗಿತ್ತು. ಇಂದು ಮುಂಜಾನೆ ಮೂವರ ಶವಗಳು ದೊರೆತಿವೆ.
ಕಳೆದ ಮೂರು ದಿನಗಳ ಹಿಂದೆ (ಜೂನ್ 28) ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಹಲ್ಯಾಳ ಗ್ರಾಮದ ಬಳಿ ಕೃಷ್ಣಾ ನದಿಗೆ ಹಾಸಿಗೆ ತೊಳೆಯಲು ಹೋಗಿದ್ದಾಗ ಅಚಾನಕ್ಕಾಗಿ ಒಬ್ಬರನ್ನು ಕಾಪಾಡಲು ಹೋಗಿ ಮತ್ತೊಬ್ಬರಂತೆ ನಾಲ್ವರು ಸಹೋದರರು ನದಿ ನೀರು ಪಾಲಾಗಿದ್ದರು. ನಿನ್ನೆ ಪರಶುರಾಮ ಗೋಪಾಲ ಬನಸೋಡೆ (24) ಎಂಬಾತನ ಮೃತದೇಹ ಪತ್ತೆಯಾಗಿತ್ತು. ಇಂದು ನಸುಕಿನ ಜಾವ ಧರೇಪ್ಪ ಗೋಪಾಲ ಬನಸೋಡೆ (29), ಸದಾಶಿವ ಬನಸೋಡೆ (22) ಹಾಗೂ ಶಂಕರ ಗೋಪಾಲ ಬನಸೋಡೆ (20) ಎಂಬುವವರ ಶವಗಳನ್ನು ಎನ್ ಡಿಆರ್ ಎಫ್ ಸಿಬ್ಬಂದಿ ಹಾಗೂ ಸ್ಥಳೀಯರು ನೀರಿನಲ್ಲಿ ಕಾರ್ಯಚರಣೆ ನಡೆಸಿ ಪತ್ತೆಹಚ್ಚಿ ಹೊರತೆಗೆದಿದ್ದಾರೆ. ಇವರ ಶವ ಹೊರತೆಗೆಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










