ಕೇಂದ್ರದ ಬಜೆಟ್ ಮೇಲೆ ನನಗೆ ನಂಬಿಕೆ ಇಲ್ಲ : ಹೆಚ್‍ಡಿಕೆ

73
firstsuddi

ದಾವಣಗೆರೆ : ಜನರನ್ನು ಮರಳು ಮಾಡಲು ಕೇಂದ್ರ ಸರ್ಕಾರ ಬಜೆಟ್ ಘೋಷಣೆ ಮಾಡಿದೆ. ಕೇಂದ್ರದ ಬಜೆಟ್ ಮೇಲೆ ನನಗೆ ನಂಬಿಕೆ ಇಲ್ಲ, ಹೆಚ್ಚಿನ ಮಹತ್ವ ಕೊಡಲ್ಲ. ಕೇಂದ್ರದಿಂದ ಮೂಗಿಗೆ ತುಪ್ಪ ಸವರುವ ಕೆಲಸ ಆಗಿದೆ ಎಂದು ಮಾಜಿ ಸಿಎಂ ಹೆಚ್‍.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದೊಂದು ಕರ್ನಾಟಕ ಕೇಂದ್ರಿತ ಚುನಾವಣಾ ಬಜೆಟ್. ಬಜೆಟ್ ನಲ್ಲಿ ಘೋಷಿಸುವ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳಾಗಿ ಪರಿಗಣಿಸಿ ಅವುಗಳನ್ನು ಜಾರಿಗೊಳಿಸಬೇಕೆಂದು ಬಹಳ ಹಿಂದೆಯೇ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಈಗ ಚುನಾವಣೆ ವರ್ಷದಲ್ಲಿ ಮಾಡಿರುವ ಕಾರ್ಯಕ್ರಮಗಳನ್ನು ಸರ್ಕಾರ ಅನುಷ್ಠಾನಕ್ಕೆ ತರೋದು ಯಾವಾಗ ಅಂತ ಕುಮಾರಸ್ವಾಮಿ ಪ್ರಶ್ನಿಸಿದರು.

ಭದ್ರಾ, ಮಹಾದಾಯಿ, ಕೃಷ್ಣ ಏನೇ ಘೋಷಣೆ ಮಾಡಿದ್ರೂ ಮೊದಲೇ ಮಾಡಬೇಕಿತ್ತು. ಇಂದಿನ ಕಾರ್ಯಕ್ರಮ ಜಾರಿಗೆ ತರಲು ಮುಂದಿನ ಸರ್ಕಾರ ಬರಬೇಕು. ಕೇಂದ್ರದ ಘೋಷಣೆ, ಘೋಷಣೆ ಆಗಿಯೇ ಉಳಿಯತ್ತೆ. ಕೇಂದ್ರದ ಹಣ ಬಿಡುಗಡೆ ಆಗುವುದರ ಒಳಗೆ ಚುನಾವಣಾ ನೀತಿ ಸಂಹಿತೆ ಬರತ್ತೆ. ಜನರನ್ನು ತಾತ್ಕಾಲಿಕವಾಗಿ ಮೆಚ್ಚಿಸಲು ಘೋಷಣೆ ಇಡಬಹುದು ಎಂದು ತಿಳಿಸಿದರು.

ಮನೆ ಬಿದ್ದಾಗ 5 ಲಕ್ಷ, ಕೋವಿಡ್ ನಲ್ಲಿ ಸಾವನ್ನಪ್ಪಿದಾಗ 1 ಲಕ್ಷ, ಕೋವಿಡ್ ವಾರಿಯರ್ಸ್ ಗೆ 30 ಲಕ್ಷ ಕೊಡ್ತಿವಿ ಅಂದಿದ್ರು, ಎಲ್ಲಿ ಕೊಟ್ಟರು. ಕೇಂದ್ರ ಘೋಷಣೆ ಮಾಡಿದ ಎಲ್ಲ ಯೋಜನೆಗಳು ಕೇವಲ ಕಾಗದದಲ್ಲಿ ಮಾತ್ರ ಇರತ್ತೆ. ರೈಲ್ವೆ ಯೋಜನೆ 20-30 ವರ್ಷಗಳ ಹಿಂದೆ ಘೋಷಣೆ ಆಗಿರುವುದು ಇನ್ನೂ ಆಮೆ ಗತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದರು.