ಕೊರೊನಾ ಬಗ್ಗೆ ನಾವು ನಿರ್ಲಕ್ಷ್ಯ ಮಾಡಿದ್ವಿ, ಇಂಥ ರೋಗ ನನ್ನ ಶತ್ರುಗಳಿಗೂ ಬರಬಾರದು : ಲಕ್ಷ್ಮೀ ಹೆಬ್ಬಾಳ್ಕರ್.

265
First Suddi

ಬೆಳಗಾವಿ : ಕೊರೊನಾ ಸೋಂಕಿನಿಂದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯ ಲೋಕಸಭಾ ಉಪಚುನಾವಣೆ ಪ್ರಚಾರದ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಹೀಗಾಗಿ ಕೆಲವು ದಿನ ಮನೆಯಲ್ಲೇ ಚಿಕಿತ್ಸೆ ಪಡೆದು ನಂತರ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಆದರೆ ಮೇ 5ರ ವರೆಗೆ ಹೋಂ ಕ್ವಾರಂಟೈನ್ ನಲ್ಲಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಕೊರೊನಾ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರ್ಲಕ್ಷ್ಯ ಮಾಡಿದ್ದರಿಂದ ನಮ್ಮ ಮನೆಯ ಹದಿನೆಂಟು ಜನ ಕುಟುಂಬಸ್ಥರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಆದರೆ ದೇವರ ದಯೆಯಿಂದ ಎಲ್ಲರೂ ಗುಣಮುಖರಾಗಿದ್ದೇವೆ. ಇಂತಹ ರೋಗ ನಮ್ಮ ಶತ್ರುಗಳಿಗೂ ಬರಬಾರದು. ಕೋವಿಡ್ ವಾರಿಯರ್ಸ್ ನಮ್ಮ ಕಣ್ಣಿಗೆ ದೇವರಾಗಿ ಕಾಣಿಸುತ್ತಿದ್ದಾರೆ. ನಾವೆಲ್ಲರೂ ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ. ನಮ್ಮ ಜಿಲ್ಲೆ, ರಾಜ್ಯ, ದೇಶವನ್ನು ಕೊರೊನಾದಿಂದ ಕಾಪಾಡಬೇಕಿದೆ ಎಂದರು.

ನಾನು ನಿರ್ಲಕ್ಷ್ಯ ಮಾಡಿದಾಗ ಕೊರೊನಾ ಬಗ್ಗೆ ಇಷ್ಟೊಂದು ತೀವ್ರತೆ ಇದೆ ಎಂದು ಗೊತ್ತಿರಲಿಲ್ಲ. ಖಂಡಿತವಾಗಿಯೂ ಇದು ತುಂಬಾ ಕೆಟ್ಟ ರೋಗ, ಅನುಭವಿಸಿದವರಿಗೇ ಮಾತ್ರ ಗೊತ್ತು. ನನ್ನ ಶತ್ರುಗಳಿಗೂ ಈ ರೋಗ ಕೊಡಬೇಡ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ. ಸರ್ಕಾರ ಕೆಲವು ದಿನ ಲಾಕ್ ಡೌನ್ ಮಾಡುವುದು ಒಳ್ಳೆಯದು. ಇಲ್ಲವಾದಲ್ಲಿ ಇಂತಹ ಗಂಭೀರ ಪರಿಸ್ಥಿತಿಯಂದ ಜನರನ್ನು ಕಾಪಾಡುವುದು ಬಹಳ ಕಷ್ಟ ಎಂದು ಹೆಬ್ಬಾಳ್ಕರ್ ಅವರು ಇದೇ ಸಂದರ್ಭದಲ್ಲಿ ಹೇಳಿದರು.