ಕೊರೊನಾ ಭೀತಿ- ಸರ್ಕಾರ ರೋಗ ನಿರೋಧಕ ಶಕ್ತಿ ವರ್ಧಕ ಕಿಟ್ ಮತ್ತು ಸ್ಯಾನಿಟೈಸರ್ ಪ್ರತಿ ಮನೆ ಮನೆಗೂ ಒದಗಿಸಲಿ-ಹೆಚ್‍ಡಿಕೆ ಆಗ್ರಹ…

131
firstsuddi

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ, ರಾಜ್ಯ ಸರ್ಕಾರ ರೋಗ ನಿರೋಧಕ ಶಕ್ತಿ ವರ್ಧಕ ಕಿಟ್ ಹಾಗೂ ಸ್ಯಾನಿಟೈಸರ್ ಪ್ರತಿ ಮನೆ ಮನೆಗೂ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಕುರಿತು ತಮ್ಮ ಟ್ವಿಟರ್ ಮೂಲಕ ಸರಣಿ ಟ್ವೀಟ್ ಮಾಡಿರುವ ಅವರು, “ಕೊರೋನಾ ವ್ಯಾಪಕ ಹೆಚ್ಚಳ ಹಿನ್ನೆಲೆಯಲ್ಲಿ ವಿಟಮಿನ್ ಸಿ ಔಷಧಿ ಹಾಗೂ ಆಯುಷ್ ಸಚಿವಾಲಯ ದೃಢೀಕರಿಸಿದ ರೋಗ ನಿರೋಧಕ ಶಕ್ತಿ ವರ್ಧಕ ಕಿಟ್ (Immunity Booster) ಮತ್ತು ಸ್ಯಾನಿಟೈಸರ್ ಪ್ರತಿ ಮನೆ ಮನೆಗೂ ಸರ್ಕಾರ ಒದಗಿಸಲಿ. ಈ ಆರೋಗ್ಯ ಕಿಟ್ ಗಳು ಪ್ರತಿ ಮೆಡಿಕಲ್ ಹಾಗೂ ಇತರ ಅಂಗಡಿಗಳಲ್ಲಿ ಮಾರಾಟಕ್ಕೂ ದೊರೆಯಲಿ. ಇದಲ್ಲದೆ ರೋಗ ಲಕ್ಷಣ ಕಂಡು ಬಂದವರಿಗೂ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಔಷಧಿಗಳನ್ನು ಪೂರೈಸಬೇಕು. ಆಗ ಮಾತ್ರ ಕರ್ನಾಟಕ ಕೊರೋನ ನಿಯಂತ್ರಣ ಮಾಡಲು ಸಾಧ್ಯ. ಎಲ್ಲರಿಗೂ ಆರೋಗ್ಯ ಕಿಟ್ ನೀಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಕನಿಷ್ಠ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಆರೋಗ್ಯ ಕಿಟ್ ನೀಡಲು ಸರ್ಕಾರ ತಕ್ಷಣವೇ ನಿರ್ಧಾರ ತೆಗೆದುಕೊಳ್ಳಬೇಕು. ಇದರ ಜೊತೆಗೆ ಕೇಂದ್ರ ಸರ್ಕಾರ ಈ ಸೋಂಕು ತಡೆಗೆ ಬಳಸಬಹುದಾದ ಯೋಗ್ಯ ಔಷಧಿಗಳ (supplements) ಪಟ್ಟಿ ಒದಗಿಸಿ ಅದನ್ನು ಸಾರ್ವಜನಿಕರು ವ್ಯಾಪಕವಾಗಿ ಬಳಸುವಂತೆ ಸಾಮೂಹಿಕ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯ. ಸರ್ಕಾರ ದಿನಕೊಂದು ನಿರ್ಧಾರ ತೆಗೆದುಕೊಳ್ಳುವ ಮೂಲಕ ಕೊರೋನಾ ವೈರಸ್ ತಡೆಯುವಲ್ಲಿ ಎಡವುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇನ್ನಾದರೂ ಜವಾಬ್ದಾರಿಯಿಂದ, ದೂರದೃಷ್ಟಿಯಿಂದ ಸರ್ಕಾರ ಕಾರ್ಯ ಸಾಧುವಾದ ಯೋಜನೆಗಳನ್ನು ಜಾರಿಗೊಳಿಸಲು ತಕ್ಷಣ ಕಾರ್ಯೋನ್ಮುಖರಾಗುವಂತೆ ಆಗ್ರಹಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.