ಕೊರೊನಾ ವೈರಸ್‍ಗೆ ವ್ಯಾಕ್ಸಿನ್ ಕಂಡುಹಿಡಿಯಲು ತಂಡ ರಚನೆ-ಹಾಸನದ ವಿಜ್ಞಾನಿಗೆ ಸ್ಥಾನ…

287
firstsuddi

ಹಾಸನ : ಕೊರೊನಾ ವೈರಸ್‍ಗೆ ವ್ಯಾಕ್ಸಿನ್ ಕಂಡುಹಿಡಿಯಲು ಯೂರೋಪ್ ರಾಷ್ಟ್ರಗಳು ಹತ್ತು ತಂಡವನ್ನು ರಚಿಸಿದ್ದು, ಆ ತಂಡದಲ್ಲಿ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮಹದೇಶ ಪ್ರಸಾದ್ ಎಂಬುವವರು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅರಕಲಗೂಡಿನ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅವರು, ಅರಕಲಗೂಡಿನ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ, ಸರ್ಕಾರಿ ಕಾಲೇಜಿನಲ್ಲಿ ಬಿಎಸ್‍ಸಿ ಪದವಿ, ಮೈಸೂರು ವಿವಿಯಲ್ಲಿ ಬಯೋಕೆಮಿಸ್ಟ್ರಿಯಲ್ಲಿ ಎಂಎಸ್‍ಸಿ ಸ್ನಾತಕೋತ್ತರ ಪದವಿ, ಬಳಿಕ ಅಮೆರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟೊರಲ್ ಸಂಶೋಧನಾಕಾರರಾಗಿದ್ದರು.

ಸದ್ಯ ಮಹದೇಶ್ ಅವರು ಜರ್ಮನಿಯಲ್ಲಿ ವಿಜ್ಷಾನಿಯಾಗಿದ್ದು, ಕಳೆದ ಎರಡು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶದಲ್ಲಿರುವ ವಿಜ್ಞಾನಿಗಳು ಭಾರತಕ್ಕೆ ಹಿಂದಿರುಗಿ ಎಂಬ ಕರೆಯ ಮೇರೆಗೆ ಭಾರತಕ್ಕೆ ವಾಪಸ್ಸಾಗಿದ್ದರು. ಈಗಾ ಯೂರೋಪ್ ರಾಷ್ಟ್ರಗಳು ಒಗ್ಗೂಡಿ ಕೊರೊನಾ ವೈರಸ್‍ಗೆ ವ್ಯಾಕ್ಸಿನ್ ಕಂಡು ಹಿಡಿಯಲು ತಂಡವನ್ನು ರಚನೆ ಮಾಡಿದ್ದಾರೆ. ಈ ತಂಡದಲ್ಲಿ ಕನ್ನಡಿಗ ಮಹದೇಶ್ ಅವರು ಸ್ಥಾನ ಪಡೆದುಕೊಂಡಿರುವುದರಿಂದ ಈಗ ಮತ್ತೆ ಬೆಲ್ಜಿಯಮ್ ಗೆ ಮರಳಿದ್ದು, ಅವರು ಸಂಶೋಧನಾ ತಂಡದಲ್ಲಿ ಸ್ಥಾನ ಪಡೆದಿರುವುದು ರಾಜ್ಯಕ್ಕೆ ಹೆಮ್ಮೆ ತರುವಂತಹ ಸಂಗತಿಯಾಗಿದೆ. ಅಲ್ಲದೇ ಮಹದೇಶ್ ಅವರು ಮೈಸೂರು ವಿವಿಯಲ್ಲಿ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಅವಧಿಕಯಲ್ಲಿ ಬಯೋಕೆಮಿಸ್ಟ್ರಿ ಪಿಹೆಚ್‍ಡಿ ಸ್ನಾತಕ ಪದವಿ ಗಳಿಸಿದ ಮೊಟ್ಟ ಮೊದಲ ಕಿರಿಯ ಎಂಬ ಹೆಗ್ಗಳಿಕೆ ಮಹದೇಶ್ ಅವರಿಗಿದ್ದು, ಮಹದೇಶ್ ಅವರು ತಮ್ಮ ಸಾಧನೆಗಾಗಿ ಕಿರಿಯ ವಯಸ್ಸಿನಲ್ಲಿಯೇ ಸತತ 5 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪುರಸ್ಕಾರಗಳನ್ನು ಮತ್ತು ಗೌರವಗಳನ್ನು ಪಡೆದ ಮೊದಲ ಕಿರಿಯ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.