ಬೆಂಗಳೂರು: ಕೌಟುಂಬಿಕ ಕಲಹ ಹಿನ್ನಲೆ ರಾಜಿ ಪಂಚಾಯಿತಿ ನಡೆಯುತ್ತಿದ್ದಾಗ ಎರಡು ಕುಟುಂಬಗಳ ಸದಸ್ಯರು ಬಬ್ಬರಿಗೊಬ್ಬರು ಹೊಡೆದಾಡಿಕೊಂಡಿರುವ ಘಟನೆ ಆರ್.ಟಿ.ನಗರದ ಸಮೀಪ ಇರುವ ಗಣೇಶ ಬ್ಲಾಕ್‍ನಲ್ಲಿ ತಡರಾತ್ರಿ ನಡೆದಿದೆ.
ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಹುಡುಗನ ಮನೆಗೆ ಬಂದ ಹುಡುಕಿ ಕಡೆಯವರು ಪಂಚಾಯಿತಿ ಮಾಡುತ್ತಿದ್ದರು. ಪಂಚಾಯಿತಿ ಮಾಡುವ ಸಮಯದಲ್ಲಿ ಹುಡುಗ ಮದ್ಯ ಸೇವನೆ ಮಾಡಿದ ಆರೋಪ ಕೇಳಿಬಂದಿದೆ. ಈ ವೇಳೆ ಹುಡುಗನ ಮನೆಯವರು ಹುಡುಗಿ ಮನೆಯವರ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ.
ಕಳೆದ ಎರಡು ವರ್ಷಗಳ ಹಿಂದೆ, ಹೆಸರುಘಟ್ಟ ಬಳಿಯ ಫಾರ್ಮ್ ಹೌಸ್‌ನಲ್ಲಿ ಹುಡುಗಿ ಮನೆಯವರು ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ನಂತರ ಪ್ರತಿ ದಿನ ಪತ್ನಿಗೆ ಹುಡುಗ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಐಸ್ ಕ್ರೀಂ, ಫಿಜ್ಜಾ ಕೊಡಿಸುವುದಕ್ಕೂ ಸಹ ಹುಡುಗಿ ಮನೆಯಲ್ಲಿ ಕರೆ ಮಾಡಿ ಹಣ ಕೊಡಿ ಅಂತಿದ್ದನಂತೆ. ಈತನ ಕಾಟಕ್ಕೆ ಬೇಸತ್ತ ಹುಡುಗಿಯ ಕುಟುಂಬಸ್ಥರು ಸಾಕಷ್ಟು ಬಾರಿ ಪಂಚಾಯಿತಿಯನ್ನು ಮಾಡಿದ್ದರು. ಆದರೆ ಹುಡುಗನ ಚಾಳಿ ಮುಂದುವರೆದಿದ್ದರಿಂದ ನಿನ್ನೆ ಹುಡುಗಿಯ ಕುಟುಂಬದವರೆಲ್ಲರೂ ಮಾತುಕತೆಗಾಗಿ ಹುಡುಗನ ಮನೆಗೆ ಬಂದಿದ್ದರು. ಈ ವೇಳೆ ಹೆಂಡತಿಯ ಮನೆಯವರು ಪಂಚಾಯತಿಗೆ ಬಂದಿದ್ದಾರೆ ಎಂದು ಗೊತ್ತಿದ್ದರೂ ಕೂಡ ಯುವಕ ಮದ್ಯಪಾನ ಮಾಡಿಕೊಂಡು ಬಂದಿದ್ದರು. ಈ ವೇಳೆ ಎರಡೂ ಕಡೆಯವರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
ಸ್ಥಳಕ್ಕೆ ಆರ್.ಟಿ.ನಗರ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದು, ಹುಡುಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.










