ಕಲಬುರಗಿ : ರಾಜ್ಯದ ಗ್ರಾಮೀಣ ಭಾಗದ ಪ್ರದೇಶದಲ್ಲಿ ವಾಸಿಸುತ್ತಿರುವ ಯುವ ಜನತೆಗೆ ಕೌಶಲ್ಯ ತರಬೇತಿಯನ್ನು ನೀಡಲು ಸಿದ್ಧಗೊಂಡಿರುವ ಸುಸಜ್ಜಿತ ಕೌಶಲ್ಯ ರಥಗಳಿಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ನಾಲ್ಕು ತರಬೇತಿ ನೀಡುವ ಬಸ್ಸುಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸಕ್ತ ವರ್ಷ 2.5 ಲಕ್ಷ ಯುವ ಜನತೆಗೆ ಕೌಶಲ್ಯ ತರಬೇತಿ ನೀಡುವ ಗುರಿ ಹೊಂದಲಾಗಿದೆ. ದೇಶದಲ್ಲಿರುವ ಒಟ್ಟಾರೆ ಜನಸಂಖ್ಯೆಯಲ್ಲಿ ಯುವ ಜನತೆಯ ಪ್ರಮಾಣ ಶೇ.46 ರಷ್ಟಿದೆ. ಹೀಗಾಗಿ ಇವರಿಗೆ ಉತ್ತಮ ಶಿಕ್ಷಣ ಮತ್ತು ಕೌಶಲ್ಯ ನೀಡಿ ಉದ್ಯೋಗ ಒದಗಿಸುವುದು ಸರ್ಕಾರದ ಕರ್ತವ್ಯ ಎಂದರು.
ಕೇಂದ್ರ ಸರ್ಕಾರವು ಪಂಡಿತ್ ದೀನ್ ದಯಾಳ್ ಯೋಜನೆಯಡಿ ಕೌಶಲ್ಯ ತರಬೇತಿ ನೀಡುತ್ತಿದೆ. ಅದೇ ರೀತಿ ರಾಜ್ಯ ಸರ್ಕಾರ ಕೌಶಲ್ಯ ಕರ್ನಾಟಕ ಯೋಜನೆಯಡಿ ಯುವಕ-ಯುವತಿಯರಿಗೆ ಸೂಕ್ತ ತರಬೇತಿ ನೀಡಿ ಸ್ವಾವಲಂಬಿಯನ್ನಾಗಿಸುವ ಪ್ರಯತ್ನ ಮುಂದುವರೆದಿದೆ. ಕೌಶಲ್ಯ ರಥಗಳು ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಂಚರಿಸಿ ಸ್ಥಳದಲ್ಲಿಯೇ ಉಚಿತವಾಗಿ ಎಲೆಕ್ಟ್ರಿಕಲ್ ಟೆಕ್ನಿಷಿಯನ್ ಮತ್ತು ಬ್ಯೂಟಿ ಥೆರಾಪಿಸ್ಟ್ ಕುರಿತು ಯುವಕ-ಯುವತಿಯರಿಗೆ ಒಂದು ತಿಂಗಳ ಕಾಲ ತರಬೇತಿ ನೀಡಿ ಸರ್ಟಿಫಿಕೇಟ್ ನೀಡಲಾಗುತ್ತಿದೆ. ಇದರಿಂದ ಅವರಿಗೆ ಸ್ವಯಂ ಉದ್ಯೋಗಕ್ಕೆ ಅನುಕೂಲವಾಗಲಿದೆ. ತರಬೇತಿ ಪಡೆದವರನ್ನು ಮಿಕ್ಸಿ, ಗೃಹ ಬಳಕೆ ಮಿಕ್ಸಿ, ಮೋಟಾರ್ ವೈಂಡಿಂಗ್ ಹೀಗೆ ಸ್ಥಳೀಯವಾಗಿ ಕಂಪನಿಗಳೊಂದಿಗೆ ಜೋಡಿಸಿ ಉದ್ಯೋಗ ಒದಗಿಸುವ ಹ್ಯಾಂಡ್ ಹೋಲ್ಡಿಂಗ್ ಜವಾಬ್ದಾರಿ ಸಹ ಕೌಶಲ್ಯ ಅಭಿವೃದ್ಧಿ ನಿಗಮ ಮಾಡಲಿದೆ ಎಂದು ತಿಳಿಸಿದರು.
ಮುಂದಿನ ದಿನದಲ್ಲಿ ಗ್ರಾಮೀಣ ಭಾಗದಲ್ಲಿ ಟ್ರಾನ್ಸ್ ಫಾರ್ಮರ್ (ಟಿ.ಸಿ) ಸಹ ಸ್ಥಳದಲ್ಲಿಯೇ ಯುವಕರು ದುರಸ್ತಿ ಮಾಡುವಂತಾಗಲು ಅಗತ್ಯ ಕೌಶಲ್ಯ ತರಬೇತಿ ನೀಡಬೇಕು ಎಂದು ಸ್ಥಳದಲ್ಲಿದ್ದ ನಿಗಮದ ಅಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದರು. ಇದರಿಂದ ರೈತಾಪಿ ವರ್ಗದ ಜನರಿಗೆ ತುಂಬಾ ಅನುಕೂಲವಾಗಲಿದೆ ತಿಳಿಸಿದರು.
ತರಬೇತಿ ವಿವರ: ಎಲೆಕ್ಟ್ರಿಕಲ್ ಟೆಕ್ನಿಷಿಯನ್ ಮತ್ತು ಬ್ಯೂಟಿ ಥೆರಾಪಿಸ್ಟ್ ಉಚಿತ ತರಬೇತಿಯ ಅವಧಿ ತಲಾ 208 ಗಂಟೆಯದ್ದಾಗಿದೆ. ಪ್ರತಿ ದಿನ 8 ಗಂಟೆ ತರಬೇತಿ ನೀಡಲಾಗುತ್ತದೆ. ಪ್ರತಿ ಬ್ಯಾಚಿನಲ್ಲಿ 15 ಜನರಿಗೆ ಅವಕಾಶವಿದ್ದು, ಒಂದು ತಿಂಗಳಿನಲ್ಲಿ 15 ಜನರಿಗೆ ತರಬೇತಿಗೆ ನೀಡಲಾಗುತ್ತದೆ.










