ನವದೆಹಲಿ : ಕ್ಷಮೆಯಾಚಿಸಲು ನಾನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ. ರೇಪ್ ಇನ್ ಇಂಡಿಯಾ ಎಂಬ ನನ್ನ ಹೇಳಿಕೆಗೆ ನಾನು ಕ್ಷಮೆಯಾಚಿಸುವುದಿಲ್ಲ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ನವದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಬಚಾವೋ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಸತ್‍ನಲ್ಲಿ ಬಿಜೆಪಿ ನಾಯಕರು ನನ್ನ ಹೇಳಿಕೆ ಬಗ್ಗೆ ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು. ಬಿಜೆಪಿ ನಾಯಕರು ಸತ್ಯದ ಮಾತಿಗೆ ಕ್ಷಮೆಯಾಚಿಸಲು ಹೇಳುತ್ತಿದ್ದಾರೆ. ಕ್ಷಮೆಯಾಚಿಸಲು ನಾನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ. ಸತ್ಯದ ಮಾತಿಗೆ ನಾನೆಂದಿಗೂ ಕ್ಷಮೆಯಾಚಿಸುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ದೇಶದ ಆರ್ಥಿಕತೆಯನ್ನು ನಾಶಪಡಿಸಿದ್ದಕ್ಕಾಗಿ ದೇಶದ ಕ್ಷಮೆಯಾಚಿಸಬೇಕು. ಮೋದಿ ಒಬ್ಬರೇ ಇಡೀ ದೇಶದ ಆರ್ಥಿಕತೆಯನ್ನು ನಾಶ ಮಾಡಿದ್ದಾರೆ. ದೇಶದ ಅರ್ಥ ವ್ಯವಸ್ಥೆಯನ್ನು ನೋಟ್ ಬ್ಯಾನ್ ಮಾಡುವ ಮೂಲಕ ನಾಶಪಡಿಸಿದ್ದಾರೆ. ಇಂದು 9ರಷ್ಟಿದ್ದ ಜಿಡಿಪಿ ಶೇ.4ಕ್ಕೆ ತಲುಪಿದೆ. ನಮ್ಮ ಪ್ರಧಾನಿ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಅವರು ದೇಶದ ಆರ್ಥಿಕತೆಯನ್ನು ನಾಶ ಪಡಿಸುತ್ತಾರೆ. ಅಲ್ಲದೇ ಯುವಜನತೆಯನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.










