ಕೊಪ್ಪಳ : ಕಬ್ಬಿಣದ ರಾಡ್‍ನಿಂದ ಹೊಡೆದು ಮಗನೊಬ್ಬ ತನ್ನ ಹೆತ್ತವರನ್ನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ನಡೆದಿದೆ. ಗಿರಿಯಪ್ಪ(60) ಹಾಗೂ ಅಕ್ಕಮ್ಮ(55) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದ್ದು, ರಮೇಶ್ ಮಡಿವಾಳರ(26) ಹೆತ್ತವರನ್ನೇ ಕೊಲೆಗೈದ ಮಗ. ಆರೋಪಿ ರಮೇಶ್ ಹಾಗೂ ಪೋಷಕರ ನಡುವೆ ರಮೇಶ್ ಪತ್ನಿಯನ್ನು ಮನೆಗೆ ಕರೆತರುವ ವಿಚಾರವಾಗಿ ಜಗಳವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ಆರೋಪಿ ಮಗ ಕಬ್ಬಿಣದ ರಾಡ್‍ನಿಂದ ಪೋಷಕರ ಮೇಲೆ ಹಲ್ಲೆ ಮಾಡಿದ್ದು, ಪರಿಣಾಮ ಅಕ್ಕಮ್ಮ ಸ್ಥಳದಲ್ಲೇ ಮೃತಪಟ್ಟಿದ್ದು, ಗಿರಿಯಪ್ಪ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕನಕಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ಮಗನನ್ನು ವಶಕ್ಕೆ ಪಡೆದಿದ್ದಾರೆ.










