ಗುದದ್ವಾರಕ್ಕೆ ಏರ್ ಪ್ರೆಶರ್ ಪೈಪ್​ನಿಂದ ಗಾಳಿ ಬಿಟ್ಟು ಸ್ನೇಹಿತನ ಕೊಂದ ಗೆಳೆಯರು…

54
firstsuddi

ಬೆಂಗಳೂರು: ಗುದದ್ವಾರಕ್ಕೆ ಏರ್ ಪ್ರೆಶರ್ ಪೈಪ್​ನಿಂದ ಗಾಳಿ ಬಿಟ್ಟ ಪರಿಣಾಮ ಒತ್ತಡ ಹೆಚ್ಚಾಗಿ ಹೊಟ್ಟೆಯೊಳಗಿನ ಕರುಳು ಛಿದ್ರವಾಗಿ ಯುವಕ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಯೋಗೇಶ್ (28) ಮೃತ ಯುವಕ. ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರ್ಚ್ 25ರಂದು ಘಟನೆ ನಡೆದಿದ್ದು, ಮುರುಳಿ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.

ಮೂಲತಃ ದೇವನಹಳ್ಳಿ ತಾಲೂಕಿನ ಯೋಗೇಶ್ ಥಣಿಸಂದ್ರದಲ್ಲಿ ಅಜ್ಜಿ ಮನೆಯಲ್ಲಿ ವಾಸವಾಗಿದ್ದು, ಫಾರ್ಮಾ ಕಂಪೆನಿಯೊಂದರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ತಂದೆ ಹಾಗೂ ಅಕ್ಕನೊಂದಿಗೆ ವಾಸವಾಗಿದ್ದ. ಏಪ್ರಿಲ್​ನಲ್ಲಿ ಯೋಗೇಶ್ ಸಹೋದರಿಯ ವಿವಾಹ ನಿಶ್ಚಯವಾಗಿತ್ತು. ಹೀಗಾಗಿ ಮದುವೆ ಕೆಲಸ ಕಾರ್ಯಗಳಿಗಾಗಿ ಓಡಾಡುತ್ತಿದ್ದರು.

ಮಾರ್ಚ್ 25ರ ಸಂಜೆ ಥಣಿಸಂದ್ರದ ಸಿಎನ್ಎಸ್ ಕಾರ್ ಸ್ಪಾ ಸರ್ವೀಸ್ ಸೆಂಟರ್​​​ಗೆ ಬೈಕ್ ಅನ್ನು ಸರ್ವೀಸ್ ಮಾಡಿಸಲು ಹೋಗಿದ್ದ. ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಮುರುಳಿ ಎಂಬಾತ ಯೋಗೇಶ್​ಗೆ ಸ್ನೇಹಿತನಾಗಿದ್ದ. ಚಡ್ಡಿ ಧರಿಸಿ ನಿಂತಿದ್ದ ಯೋಗೇಶ್‌ನನ್ನು ನೋಡಿದ ಮುರುಳಿ, ತಮಾಷೆಗಾಗಿ ಹಿಂದೆಯಿಂದ ತೆರಳಿ ಏಕಾಏಕಿ ಆತನ ಗುದದ್ವಾರಕ್ಕೆ ಏರ್ ಪ್ರೆಶರ್​​ನಿಂದ ಗಾಳಿ ಬಿಟ್ಟಿದ್ದಾನೆ.

ಗಾಳಿಯ ಒತ್ತಡ ಹೆಚ್ಚಾಗಿ ಹೊಟ್ಟೆ ಉತಾ ಬಂದು ಕರಳು ಬ್ಲಾಸ್ಟ್ ಆಗಿ ಯೋಗೇಶ್ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೂಡಲೇ ಆತನನ್ನು ಮುರುಳಿ ಹಾಗೂ ಇನ್ನಿತರರು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಯೋಗೇಶ್ ಸಾವನ್ನಪ್ಪಿದ್ದಾನೆ.

ಘಟನೆ ಸಂಬಂಧ ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೆಕ್ಷನ್ 304 ಅಡಿ ಕೇಸ್ ದಾಖಲಿಸಿಕೊಂಡು ಸಂಪಿಗೇಹಳ್ಳಿ ಪೊಲೀಸರು ಸ್ನೇಹಿತ ಮುರಳಿಯನ್ನು ಬಂಧಿಸಿದ್ದಾರೆ.