ಮೈಸೂರು : ಕನ್ನಡ ಪ್ರೇಮಿ ಸೈಯದ್ ಇಸಾಕ್ ಅವರು ನಡೆಸುತ್ತಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ದುಷ್ಕರ್ಮಿಗಳು ಬೆಂಕಿಯಿಟ್ಟಿದ್ದು, 11,000 ಪುಸ್ತಕಗಳು ಸುಟ್ಟು ಭಸ್ಮವಾಗಿವೆ. ಕಳೆದ 11 ವರ್ಷಗಳಿಂದ ನಗರದ ರಾಜೀವ್ ನಗರದಲ್ಲಿ ಭಗವದ್ಗೀತೆ, ಕುರಾನ್, ಬೈಬಲ್, ಕನ್ನಡ ಪುಸ್ತಕಗಳು, ಸೇರಿದಂತೆ ಸುಮಾರು 11,000 ಸಾವಿರ ಪುಸ್ತಕಗಳನ್ನು ಇಟ್ಟುಕೊಂಡಿದ್ದರು. ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆವರೆಗೆ ಗ್ರಂಥಾಲಯಕ್ಕೆ ಬರುವ ಪುಸ್ತಕ ಪ್ರೇಮಿಗಳಿಗೆ ಉಚಿತವಾಗಿ ಗ್ರಂಥಾಲಯ ವ್ಯವಸ್ಥೆ ಒದಗಿಸುತ್ತಿದ್ದರು. ಅವರ ಪ್ರೀತಿ ಜಿಲ್ಲೆಯಲ್ಲಿ ಅಪಾರ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಕಿಡಿಗೇಡಿಗಳು ಗ್ರಂಥಾಲಯಕ್ಕೆ ಬೆಂಕಿ ಇಟ್ಟು ಪರಾರಿಯಾಗಿದ್ದಾರೆ. ನಿನ್ನೆ ಬೆಳಗ್ಗೆ ಈ ಘಟನೆ ನಡೆದಿದ್ದು, ಪುಸ್ತಕಗಳು ಬೆಂಕಿಗಾಹುತಿಯಾಗಿರುವುದನ್ನು ನೋಡಿ ಸೈಯದ್ ಇಸಾಕ್ ಅವರು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










