ಹುಬ್ಬಳ್ಳಿ : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರ ಹತ್ಯೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಹತ್ಯೆ ನಡೆದ ಕೇವಲ ನಾಲ್ಕೇ ಗಂಟೆಗಳಲ್ಲಿ ಹಂತಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಂಧಿತರನ್ನು ಮಹಾಂತೇಶ್, ಮಂಜುನಾಥ್ ಎಂದು ಗುರುತಿಸಲಾಗಿದೆ. ಹತ್ಯೆ ನಂತರ ಕಾರಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಗಳನ್ನು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಬಂಧಿಸಿದ್ದಾರೆ.
ಆಪ್ತ ಮಹಾಂತೇಶ್ ನಿಂದಲೇ ಈ ಹತ್ಯೆ ನಡೆದಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸಿಸಿಟಿವಿ ಆಧಾರದಲ್ಲಿ ಮಹಾಂತೇಶ್ ನನ್ನು ಗುರುತಿಸಲಾಗಿದ್ದು, ಈಗಾಗಲೇ ಮಹಾಂತೇಶ್ ಪತ್ನಿ ವನಜಾಕ್ಷಿಯನ್ನು ಗೋಕುಲ ರೋಡ್ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ವನಜಾಕ್ಷಿ ಸರಳವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಯಾಗಿದ್ದಾಳೆ. ಈ ಹಿಂದೆ ಗುರೂಜಿ ವನಜಾಕ್ಷಿ ಹೆಸರಿನಲ್ಲಿ ಹುಬ್ಬಳ್ಳಿಯ ಗೋಕುಲ ರಸ್ತೆ ಬಳಿಯ ಅಪಾರ್ಟ್ಮೆಂಟ್ ನಿರ್ಮಿಸಿದ್ದರು. ಈ ಬೇನಾಮಿ ಆಸ್ತಿಯನ್ನು ಗುರೂಜಿ ವಾಪಸ್ ಕೇಳಿದ್ದರು. ಈ ವಿಚಾರ ಅಲ್ಲದೇ ಹಣಕಾಸಿನ ವಿಚಾರವಾಗಿ ಕೆಲ ದಿನಗಳಿಂದ ಮಹಾಂತೇಶ್ ಮಧ್ಯೆ ಗಲಾಟೆ ನಡೆಯುತ್ತಿತ್ತು. ಇದೇ ವಿಚಾರವಾಗಿ ಗುರೂಜಿ ಕೊಲೆಯಾಗಿರಬಹುದು ಎಂದು ಪ್ರಾಥಮಿಕ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಸರಳ ವಾಸ್ತು ಮೂಲಕ ಜನಪ್ರಿಯರಾಗಿದ್ದ ಚಂದ್ರಶೇಖರ್ ಗುರೂಜಿ ಅವರನ್ನು ಹುಬ್ಬಳ್ಳಿಯ ಹೋಟೆಲ್ ನಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಹೋಟೆಲ್ ನಲ್ಲಿ ತಂಗಿದ್ದ ಇವರನ್ನು ಕರೆ ಮಾಡಿ ಇಬ್ಬರು ರಿಸೆಪ್ಶನಿಸ್ಟ್ ಜಾಗಕ್ಕೆ ಬರಲು ಹೇಳಿದ್ದಾರೆ. ಗುರೂಜಿ ಇವರ ಬಳಿ ಬರುತ್ತಿದ್ದಂತೆ ಇಬ್ಬರು ಎದ್ದು ನಿಂತಿದ್ದಾರೆ. ಗುರೂಜಿ ಕುಳಿತ ಬಳಿಕ ಒಬ್ಬ ಆಶೀರ್ವಾದ ಪಡೆಯುವ ನಾಟಕ ಮಾಡಿದ್ದರೆ ಮತ್ತೊಬ್ಬ ನಿಂತಿದ್ದ. ಕೆಲ ಕ್ಷಣದಲ್ಲೇ ಮುಂದುಗಡೆ ನಿಂತಿದ್ದ ಯುವಕ ಚಾಕುವಿನಿಂದ ಇರಿದಿದ್ದಾನೆ. ನಂತರ ಇಬ್ಬರು ಹೊಟ್ಟೆ ಹಾಗೂ ಎದೆಯ ಭಾಗಕ್ಕೆ 60ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದಿದ್ದಾರೆ. ಗುರೂಜಿಯವರು ರಕ್ತದ ಮಡುವಿನಲ್ಲಿ ಬೀಳುತ್ತಿದ್ದಂತೆಯೇ ದುಷ್ಕರ್ಮಿಗಳು ಘಟನಾ ಸ್ಥಳದಿಂದ ಪರಾರಿಯಾಗಿದ್ದರು.










