ಮೂಡಿಗೆರೆ : ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಿನ್ನೆ ಬೆಳಗ್ಗೆ ರಸ್ತೆಯಲ್ಲಿ ಮಂಜು ಕವಿದಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರೊಂದು ಮಗುಚಿ ಬಿದ್ದು ಕಾರಿನಲ್ಲಿದ್ದ ಐವರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ವೇಳೆ ಕಾರಿನಲ್ಲಿದ್ದ ಅಮೂಲ್ಯ ದಾಖಲೆಗಳು ಹಾರಿ ಹೋಗಿದ್ದವು. ಆ ದಾಖಲೆಗಳು ತುಂಬಾ ಮುಖ್ಯವಾಗಿರೋದು ಎಂದು ಕಾರಿನಲ್ಲಿದ್ದವರು ಗೋಗರೆದಾಗ ಚಾರ್ಮಾಡಿಯ ಆಪತ್ಫಾಂದವ ಎಂದೇ ಕರೆಸಿಕೊಳ್ಳೊ ಸ್ಥಳಿಯ ಸ್ನೇಕ್ ಆರೀಫ್, ಜೀವದ ಹಂಗು ತೊರೆದು ಕ್ರೇನ್ ಮೂಲಕ ನೇತಾಡಿಕೊಂಡು ಚಾರ್ಮಾಡಿಯ ಘಾಟಿಯ ಪ್ರಪಾತಕ್ಕೆ ಇಳಿದು ದಾಖಲೆಗಳನ್ನ ಕಾರಿನಲ್ಲಿದ್ದ ವ್ಯಕ್ತಿಗೆ ಹಿಂದಿರುಗಿಸಿ ಸಾಹಸ ಮೆರೆದಿದ್ದಾರೆ. ಅವರ ಈ ಸಾಹಸಿ ಪ್ರವೃತ್ತಿಗೆ ಕಾರಿನಲ್ಲಿದ್ದವರು ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ದಾಖಲೆಗಳನ್ನ ಹುಡುಕಲು ಸ್ನೇಕ್ ಆರೀಫ್ ತೆಗೆದುಕೊಂಡ ರಿಸ್ಕ್ ಬಗ್ಗೆ ಸ್ಥಳಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು, ಮತ್ತೊಂದೆಡೆ ಇಂತಹಾ ರಿಸ್ಕ್ ಬೇಕಿತ್ತಾ ಎಂಬ ಮಾತುಗಳು ಕೇಳಿ ಬಂದಿವೆ. ಒಂದು ವೇಳೆ, ಆರೀಫ್ ಜೀವಕ್ಕೆ ಹೆಚ್ಚು-ಕಮ್ಮಿಯಾಗಿದ್ರೆ ಜವಾಬ್ದಾರಿ ಯಾರು ಎಂಬ ಪರವಿರೋಧದ ಮಾತುಗಳು ಕೇಳಿ ಬಂದಿವೆ. ಆದರೆ, ಕಾರಿನಿಂದ ಬಿದ್ದವರು ಯಾರೋ. ಡಾಕ್ಯುಮೆಂಟ್ ಕಳೆದು ಹೋಗಿದ್ದು ಯಾರದ್ದೋ. ಆದ್ರೆ, ಅಪಘಾತವಾಗಿ ಎಲ್ಲರೂ ಗಾಬರಿಯಾಗಿದ್ದಾಗ ಅಮೂಲ್ಯವಾದ ದಾಖಲೆಗಳನ್ನ ಹುಡುಕೋದು ಚಾರ್ಮಾಡಿಯಂತಹಾ ಪ್ರಪಾತದ ಜಾಗದಲ್ಲಿ ಕಷ್ಟಸಾಧ್ಯವಲ್ಲ. ಕಷ್ಟವೇ ಸರಿ. ಆದರೆ, ಜೀವದ ಹಂಗು ತೊರೆದು ದಾಖಲೆ ತಂದು ಕೊಟ್ಟ ಸ್ನೇಕ್ ಆರೀಫ್ ಸಾಹಸಕ್ಕೆ ಮೆಚ್ಚಲೇಬೇಕು.









