ಚಿಕ್ಕಬಳ್ಳಾಪುರ : ಹುಟ್ಟುಹಬ್ಬದ ಪಾರ್ಟಿಗೆ ಆಗಮಿಸಿದ ಬೆಂಗಳೂರು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಮೃತಪಟ್ಟಿರುವ ಘಟನೆ ತಾಲೂಕಿನ ಜಕ್ಕಲಮಡಗು ಜಲಾಶಯದ ಹಿನ್ನೀರಿನಲ್ಲಿ ನಡೆದಿದೆ.
ಬೆಂಗಳೂರು ನಗರದ ಸುಂಕದಕಟ್ಟೆ ನಿವಾಸಿ, ರೋಹಿತ್ (24) ಸಾವನ್ನಪ್ಪಿದ ಯುವಕ. ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ರೋಹಿತ್ 5 ಜನ ಸ್ನೇಹಿತರೊಂದಿಗೆ ಬರ್ತ್ ಡೆ ಪಾರ್ಟಿ ಆಚರಣೆಗೆ ಬಂದಿದ್ದ. ಈ ವೇಳೆ ಹಿನ್ನೀರಿನಲ್ಲಿರುವ ಮರದ ಮೇಲೆ ಹತ್ತಿ ಸ್ನೇಹಿತರು ಸೆಲ್ಫಿ, ವೀಡಿಯೋ ಮಾಡಿಕೊಳ್ಳುತ್ತಿದ್ದರು. ಈಜು ಬರದಿದ್ದರೂ ಸ್ನೇಹಿತರು ನೀರಿಗೆ ಇಳಿದಿದ್ದರು. ಕುಡಿದ ಅಮಲಿನಲ್ಲಿ ಮರದ ಮೇಲೆ ಹತ್ತಿ ರೋಹಿತ್ ಹುಚ್ಚಾಟ ಮಾಡಿದ್ದಾನೆ. ಈ ವೇಳೆ ಮರದ ಮೇಲಿಂದ ಬಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಶವವನ್ನು ನೀರಿನಿಂದ ಹೊರ ತೆಗೆದಿದ್ದಾರೆ. ತಾಲ್ಲೂಕಿನ ಜಕ್ಕಲಮಡಗು ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.










