ಚಿಕ್ಕಮಗಳೂರು:ಅಂಬೇಡ್ಕರ್ ಅವರು ನೀಡಿರುವ ಮತದಾನದ ಹಕ್ಕನ್ನು ಶೋಷಿತರು ಸದ್ಬಳಕೆ ಮಾಡಿಕೊಂಡು ಅಧಿಕಾರಕ್ಕೆ ಬರಬೇಕು:ಪಿ.ಪರಮೇಶ್

163

ಚಿಕ್ಕಮಗಳೂರು: ದಲಿತರು ಮತ್ತು ಶೋಷಿತರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಅವರ ರಾಜಕೀಯ ಹಾದಿಯಲ್ಲಿ ಸಾಗಬೇಕು ಎಂದು ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಸಲಹೆ ಮಾಡಿದರು.
ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದ ಪ್ರಯುಕ್ತ ಬಿಎಸ್‍ಪಿ ನಗರ ಘಟಕ ಇಲ್ಲಿನ ಶಂಕರಪುರ ಬಡಾವಣೆಯಲ್ಲಿ ಭಾನುವಾರ ಏರ್ಪಡಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು.
ದೇಶದ ಅಲ್ಪಸಂಖ್ಯಾತರಾದ ಬಹುತೇಕ ಎಲ್ಲಾ ಮೇಲ್ವರ್ಗದವರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಅದಕ್ಕೆ ಮೂಲ ಕಾರಣ ಅವರು ರಾಜಕೀಯ ಹಾದಿಯಲ್ಲಿರುವುದು. ಆದರೆ ಆ ದಾರಿಯನ್ನು ತುಳಿಯದ ಕಾರಣ ದೇಶದಲ್ಲಿ ನೂರು ಕೋಟಿಯಷ್ಟು ಕೆಳವರ್ಗದ ಜನ ಸಂಕಷ್ಟದಲ್ಲಿದ್ದಾರೆ, ಹೊಟ್ಟೆಗೆ ಬಟ್ಟೆಗೆ ಮತ್ತು ಮಕ್ಕಳನ್ನು ಓದಿಸಲು ಹಣವಿಲ್ಲದೆ ಹೈರಾಣಾಗಿದ್ದಾರೆ ಎಂದ ಅವರು ಈ ಕುರಿತು ಆ ವರ್ಗ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಅಂಬೇಡ್ಕರ್ ಅವರು ತಮ್ಮ ಇಡೀ ಜೀವನವನ್ನು ಶೋಷಿತರ ಏಳಿಗೆಗಾಗಿ ತೇಯ್ದಿದ್ದಾರೆ, ಆ ಹಾದಿಯಲ್ಲಿ ಬಹಳಷ್ಟು ನೋವು, ಅಪಮಾನ ಅನುಭವಿಸಿದ್ದಾರೆ, ಅವರ ಹೋರಾಟದಿಂದಾಗಿ ಇಂದು ಮತದಾನದ ಹಕ್ಕು, ಮೀಸಲಾತಿ ಸೇರಿದಂತೆ ಅನೇಕ ಸವಲತ್ತುಗಳನ್ನು ಪಡೆದುಕೊಂಡು ಸ್ವಲ್ಪ ನೆಮ್ಮದಿಯಿಂದ ಬದುಕುತ್ತಿರುವ ಶೋಷಿತರು ಅಂಬೇಡ್ಕರ್ ಅವರನ್ನೇ ಕೈಬಿಟ್ಟಿದ್ದಾರೆ ಎಂದು ವಿಷಾದಿಸಿದರು.
ಶೋಷಿತ ವರ್ಗ ಅಂಬೇಡ್ಕರ್ ಅವರ ಆಶಯದಂತೆ ಸ್ವಾಭಿಮಾನಿಗಳಾಗಬೆಕು, ಅವರು ಹಾಕಿಕೊಟ್ಟ ಹಾದಿಯಲ್ಲಿ ಅವರ ಸಂದೇಶಗಳ ಬೆಳಕಿನಲ್ಲಿ ಸಾಗಬೇಕು, ನಾವು ದೇಶವನ್ನು ಆಳಲು ಹುಟ್ಟಿದ್ದೇವೆ ಎಂಬುದನ್ನು ಅರಿತು ಮೇಲ್ವರ್ಗದ ರಾಜಕೀಯ ಪಕ್ಷಗಳಿಂದ ಹೊರಬಂದು ತಾವೇ ಅಧಿಕಾರಕ್ಕೆ ಬರುವ ಪ್ರತಿಜ್ಞೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಪಿ.ಪರಮೇಶ್ ಶೋಷಿತರಿಗಾಗಿ ತಮ್ಮ ಜೀವನವನ್ನೇ ತೇಯ್ದ ಅಂಬೇಡ್ಕರ್ ಅವರು ನಿಧನರಾಗಿ 6 ದಶಕಗಳಾದರೂ ಇನ್ನೂ ಕನಿಷ್ಠ 60 ಜನ ಅವರ ಅನುಯಾಯಿಗಳನ್ನು ಶಾಸಕರನ್ನಾಗಿ ಮಾಡಲು ಸಾಧ್ಯವಾಗದ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಅಂಬೇಡ್ಕರ್ ಅವರು ನೀಡಿರುವ ಮತದಾನದ ಹಕ್ಕನ್ನು ಶೋಷಿತರು ಸದ್ಬಳಕೆ ಮಾಡಿಕೊಂಡು ಅಧಿಕಾರಕ್ಕೆ ಬರಬೇಕು ಎಂದು ಮನವಿ ಮಾಡಿದರು.
ಬಿಎಸ್‍ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ ಅಧ್ಯಕ್ಷತೆ ವಹಿಸಿದ್ದರು, ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ನ್ಯಾಯವಾದಿ ರಮೇಶ್, ನಗರಾಧ್ಯಕ್ಷ ಹನುಮಂತರಾಯ, ಕಾರ್ಯದರ್ಶಿ ವಿನೀತ್, ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ವಸಂತ, ಲಕ್ಷ್ಮಣ್ ಉಪಸ್ಥಿತರಿದ್ದರು.