ಚಿಕ್ಕಮಗಳೂರು : ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗಳನ್ನು ತಕ್ಷಣ ನಿರ್ಬಂಧಿಸುವಂತೆ ಬಿಎಸ್‍ಪಿ ಒತ್ತಾಯ…

138
Firstsuddi

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗಳನ್ನು ತಕ್ಷಣ ನಿರ್ಬಂಧಿಸುವಂತೆ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ಶುಕ್ರವಾರ ಭೇಟಿ ಮಾಡಿದ ಪಕ್ಷದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಶಿವಮೊಗ್ಗ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕಲ್ಲು ಕ್ವಾರಿಗಳು ಯಾವುದೇ ಪರವಾನಗಿ ಮತ್ತು ಮುನ್ನೆಚ್ಚರಿಕಾ ಕ್ರಮಗಳಿಲ್ಲದೆ ಅಕ್ರಮವಾಗಿ ನಡೆಯುತ್ತಿವೆ, ಈಗಾಗಲೇ ಕ್ವಾರಿಗಳಲ್ಲಿ ಸಂಭವಿಸಿದ ಸ್ಪೋಟಗಳಲ್ಲಿ ಅನೇಕ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ದೂರಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲೂ ಎಲ್ಲೆಂದರಲ್ಲಿ ಕಲ್ಲು ಕ್ವಾರಿಗಳು ಅಕ್ರಮವಾಗಿ ನಡೆಯುತ್ತಿವೆ ನಗರದಿಂದ ಕೇವಲ 2 ಕಿ.ಮೀ ದೂರದಲ್ಲಿರುವ ನಲ್ಲೂರಿನಲ್ಲೂ ಗಣಿಗಾರಿಕೆ ಹಲವು ವರ್ಷಗಳಿಂದ ನಡೆಯುತ್ತಿದೆ, ಯಾವುದೇ ಮುನ್ನೆಚ್ಚರಿಕೆ ಕ್ರಮಗಳಿಲ್ಲದಿರುವುದರಿಂದ ಅವುಗಳಲ್ಲಿರುವ ಕಾರ್ಮಿಕರು ಜೀವ ಬಿಗಿಹಿಡಿದು ಕೆಲಸ ಮಾಡುತ್ತಿದ್ದಾರೆ ಎಂದರು.

ಕಾರ್ಮಿಕರ ಹಿತರಕ್ಷಣೆ ಮತ್ತು ಬೇರೆ ಜಿಲ್ಲೆಗಳಲ್ಲಾದಂತೆ ನಮ್ಮ ಜಿಲ್ಲೆಯಲ್ಲೂ ಸ್ಪೋಟ ಮತ್ತು ಪ್ರಾಣಹಾನಿ ಆಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ತಕ್ಷಣ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆಗಳನ್ನು ನಿರ್ಬಂಧಿಸಬೇಕು, ಅಕ್ರಮವಾಗಿ ನಡೆಸುತ್ತಿರುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ, ಪದಾಧಿಕಾರಿಗಳಾದ ಕೆ.ಎಸ್.ಮಂಜುಳಾ, ರೇಖಾ, ವಸಂತ, ಮೋಹನ್, ಹುಣಸೇಮಕ್ಕಿ ಲಕ್ಷ್ಮಣ್, ವಿನೀತ್ ಹಾಜರಿದ್ದರು.