ಚಿಕ್ಕಮಗಳೂರು : ಅರಣ್ಯಗಳು ರಾಷ್ಟ್ರೀಯ ಸಂಪತ್ತು, ಅವುಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ : ಶಿಲ್ಪಾ.

573
firstsuddi

ಚಿಕ್ಕಮಗಳೂರು : ಅರಣ್ಯಗಳು ರಾಷ್ಟ್ರೀಯ ಸಂಪತ್ತು, ಅವುಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ವಲಯ ಅರಣ್ಯಾಧಿಕಾರಿ ಶಿಲ್ಪಾ ಹೇಳಿದರು.
ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಸೋಮವಾರ ನಡೆದ ಹರ್ಷವರ್ಧನ ಎಂ.ಎಲ್.ವಾಸುದೇವಮೂರ್ತಿ ಪ್ರೌಢಶಾಲೆಯ 62ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ದುರಾಸೆ, ಸ್ವಾರ್ಥ, ಅತಿಯಾದ ಭೋಗಲಾಲಸೆ ಮತ್ತು ಅಭಿವೃದ್ದಿಯ ಹಪಾಹಪಿಯಿಂದಾಗಿ ಅರಣ್ಯಗಳು ನಾಶವಾಗಿವೆ, ಮಿತಿಮೀರಿದ ವಾಹನಗಳ ಬಳಕೆ, ಕಾರ್ಖಾನೆಗಳ ಹೊಗೆಯಿಂದಾಗಿ ವಾಯುಮಾಲಿನ್ಯ ದಿನೇದಿನೇ ಹೆಚ್ಚುತ್ತಿದೆ, ಇದರಿಂದಾಗಿ ಅತಿವೃಷ್ಠಿ, ಅನಾವೃಷ್ಠಿ, ಪ್ರಕೃತಿ ವಿಕೋಪ ಸಂಭವಿಸುತ್ತಿವೆ, ಶುದ್ದವಾದ ನೀರು ಮತ್ತು ಗಾಳಿಯಿಲ್ಲದೆ ಅನೇಕ ರೋಗರುಜಿನಗಳಿಗೆ ತುತ್ತಾಗುತ್ತಿದ್ದೇವೆ ಎಂದು ವಿಷಾದಿಸಿದರು.
ಪ್ಲಾಸ್ಟಿಕ್ ಬಾಟಲಿಯ ನೀರು ಕುಡಿಯುವುದರಿಂದ ಮಾರಕ ಕ್ಯಾನ್ಸರ್ ಬರುತ್ತಿದೆ, ಪ್ಲಾಸ್ಟಿಕ್ ಬಳಸುವ ಮೂಲಕ ನಮ್ಮನ್ನು ನಾವೇ ಸಾಯಿಸಿಕೊಳ್ಳುತ್ತಿದ್ದೇವೆ ಎಂದ ಅವರು ಪರಿಸ್ಥಿತಿ ಕೈಮೀರುವ ಮುನ್ನ ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು, ಅರಣ್ಯಗಳನ್ನು ಹೆಚ್ಚು ಬೆಳೆಸಬೇಕು, ಹಸಿರು ಪರಿಸರವನ್ನು ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎನ್.ಕೇಶವಮೂರ್ತಿ ವಿದ್ಯಾರ್ಥಿಗಳು ಶಿಕ್ಷಣವಂತರಾಗುವುದರ ಜೊತೆಗೆ ಉತ್ತಮ ನಾಗರೀಕರಾಗಿಯೂ ರೂಪುಗೊಳ್ಳಬೇಕು ಎಂದು ಸಲಹೆ ಮಾಡಿದರು.
ಮುಖ್ಯ ಶಿಕ್ಷಕ ಬಿ.ಎಂ.ಲೋಕೇಶ್ ಶಾಲೆಯ ವಾರ್ಷಿಕ ವರದಿಯನ್ನು ಮಂಡಿಸಿದರು, ವಾರ್ಷಿಕೋತ್ಸವದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು.
ಸಂಸ್ಥೆಯ ಉಪಾಧ್ಯಕ್ಷೆ ರಾಧಾ ಸುಂದರೇಶ್, ಗೌರವ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯಕುಮಾರ್, ನಿರ್ದೇಶಕಿ ಟಿ.ಶ್ರೀದೇವಿ, ಆಡಳಿತಾಧಿಕಾರಿ ಎಸ್.ಶಾಂತಕುಮಾರಿ ಉಪಸ್ಥಿತರಿದ್ದರು.
ಶಿಕ್ಷಕರಾದ ರೂಪ ಕಾರ್ಯಕ್ರಮವನ್ನು ನಿರೂಪಿಸಿದರು, ಜಿ.ಬಿ.ಸುರೇಶ್ ಸ್ವಾಗತಿಸಿದರು, ಹೇಮಾಮಾಲಿನಿ ವಂದಿಸಿದರು.