ಕಾಫಿನಾಡ ಪೊಲೀಸರ ಭರ್ಜರಿ ಕಾರ್ಯಾಚರಣೆ ; ಒಂದು ಕೋಟಿ ಮೌಲ್ಯದ ಪುರಾತನ ಕಾಲದ ರತ್ನ ವಶ…

148
firstsuddi

ಚಿಕ್ಕಮಗಳೂರು : ನಕಲಿ ನೋಟು ಚಲಾವಣೆ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಜಿಲ್ಲೆಯ ಸೈಬರ್ ಠಾಣೆಯ ಇನ್ ಸ್ಪೆಕ್ಟರ್ ಎ.ಕೆ. ರಕ್ಷಿತ್ ಮತ್ತು ತಂಡದವರು ಕಾರ್ಯಾಚರಣೆ ನಡೆಸಿ ಮಂಗಳೂರಿನಲ್ಲಿ ಬಂಧಿಸಿದ್ದು, ಬಂಧಿತರಿಂದ ಸುಮಾರು ಒಂದು ಕೋಟಿ ಮೌಲ್ಯದ ಪುರಾತನ ಕಾಲದ ರತ್ನದ ಹರಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ವರ್ಷ ಅಕ್ಟೋಬರ್ ನಲ್ಲಿ ಆಲ್ದೂರು ಠಾಣೆಯ ಪೊಲೀಸರು ನಕಲಿ ನೋಟು ಚಲಾವಣೆ ಜಾಲವೊಂದನ್ನು ಭೇದಿಸಿದ್ದರು. ಜಾಲದ ಕೆಲ ಆರೋಪಿಗಳನ್ನು ಬಂಧಿಸಿದ್ದರು. ನಕಲಿ ನೋಟುಗಳು, ವಾಹನ, ಪರಿಕರಗಳನ್ನು ವಶಪಡಿಸಿಕೊಂಡಿದ್ದರು. ಜಾಲದ ಇನ್ನೂ ಕೆಲ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದರು. ಉಲ್ಲಾಳ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. 2019ರಲ್ಲಿ ಈ ಆರೋಪಿಗಳು ಖರೀದಿ ನೆಪದಲ್ಲಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಂದ 510 ಕ್ಯಾರೆಟ್ ನ ಸುಮಾರು 50 ಲಕ್ಷದಿಂದ 1 ಕೋಟಿ ರೂ ಬೆಲೆಬಾಳುವ ರತ್ನವೊಂದನ್ನು ಲಪಟಾಯಿಸಿದ್ದರು. ಶಿವಮೊಗ್ಗದ ದೊಡ್ಡಪೇಟೆಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈಗ ಬಂಧಿಸಿರುವ ಇಬ್ಬರು ಆರೋಪಿಗಳ ಪೈಕಿ ಒಬ್ಬನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಹಲ್ಲೆ ಹಾಗೂ ಕಳ್ಳತನದ ಆರು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೋರ್ಟ್ ಜಾಮೀನುರಹಿತ ವಾರೆಂಟ್ ಜಾರಿ ಮಾಡಿದೆ. ಕೇರಳದಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ. ಮೈಸೂರು, ಹಾಸನ ಜಿಲ್ಲೆಗಳಲ್ಲಿ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಸಿ.ಇ.ಎನ್.ಠಾಣೆಯ ಇನ್ಸ್ ಪೆಕ್ಟರ್ ರಕ್ಷಿತ್ ಎ.ಕೆ. ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಈ ತಂಡಕ್ಕೆ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರಾಯ್ ಅವರು ಬಹುಮಾನ ಘೋಷಿಸಿದ್ದಾರೆ.