ಚಿಕ್ಕಮಗಳೂರು : ಒಳ್ಳೆಯದು ಮತ್ತು ಒಳ್ಳೆಯವರನ್ನು ಗುರುತಿಸುವ ಕೆಲಸವನ್ನು ಇಂದಿನ ಯುವ ಪೀಳಿಗೆ ಮಾಡಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಶ್ರೀಕಂಠ ಕೂಡಿಗೆ ಸಲಹೆ ಮಾಡಿದರು.
ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರದ ಸಾಯಿ ಏಂಜೆಲ್ಸ್ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಒಳ್ಳೆಯದು ಮತ್ತು ಒಳ್ಳೆಯವರನ್ನು ಗುರುತಿಸಿಕೊಳ್ಳಲು ಆಗದಂತಹ ಸಮಾಜ ಇಂದು ನಮ್ಮ ನಡುವೆ ಇದೆ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರನ್ನು ಕೊಂದದ್ದು ಒಳ್ಳೆಯದೇ ಆಯಿತು ಎನ್ನುವವರು ಮತ್ತು ರಾಷ್ಟ್ರಪಿತನನ್ನು ಕೊಂದವನ ದೇವಾಲಯ ಕಟ್ಟಿ ಪೂಜಿಸುವವರ ನಡುವೆ ನಾವಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಇಂದಿನ ವಿದ್ಯಾರ್ಥಿಗಳು ಮತ್ತು ಯುವಜನತೆ ವಿವೇಕ ಮತ್ತು ವಿವೇಚನೆಯನ್ನು ಬೆಳೆಸಿಕೊಳ್ಳಬೇಕು, ಒಳ್ಳೆಯದು ಮತ್ತು ಒಳ್ಳೆಯವರನ್ನು ಗುರುತಿಸುವುದನ್ನು ಕಲಿಯಬೇಕು, ಜಗತ್ತಿನಲ್ಲಿ ಅನೇಕ ಒಳ್ಳೆಯ ಸಂಗತಿಗಳಿವೆ, ಒಳ್ಳೆಯ ವ್ಯಕ್ತಿಗಳು, ಆದರ್ಶ ರಾಜಕಾರಣಿಗಳು, ದೇಶಭಕ್ತರು, ಪ್ರಾಮಾಣಿಕ ಅಧಿಕಾರಿಗಳು, ಉತ್ತಮ ನಾಯಕರು ಹಿಂದೆ ಇದ್ದರು ಅಂತಹ ವ್ಯಕ್ತಿಗಳನ್ನು ಸಾಧಕರನ್ನು ಗುರುತಿಸಿ ಅವರ ಬಗ್ಗೆ ತಿಳಿದುಕೊಂಡರೆ ನಾವೂ ಸಹ ಸಾಧಕರಾಗಬಹುದು ಎಂದು ಕಿವಿಮಾತು ಹೇಳಿದರು.
ಸಾಧಕರನ್ನು ಗುರುತಿಸುವುದು ಕಷ್ಟದ ಕೆಲಸ, ದೊಡ್ಡ ಸಾಧಕರನ್ನು ದೊಡ್ಡವರು ಗುರುತಿಸುತ್ತಾರೆ, ಆದರೆ ಸಮಾಜದಲ್ಲಿ ಎಲೆಮರೆಯ ಕಾಯಿಯಂತಿರುವ ಸಣ್ಣಸಣ್ಣ ಸಾಧಕರನ್ನು ಗುರುತಿಸುವ ಕೆಲಸವಾಗಬೇಕು ಅದನ್ನು ಯುವಜನತೆ ಮಾಡಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಸಾಹಿತಿ ಹಳೇಕೋಟೆ ರಮೇಶ್ ಅವರಿಗೆ ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು, ಕಾಲೇಜಿನ ಪ್ರಾಂಶುಪಾಲ ಕೆ.ಕೆ.ನಾಗರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇದೇ ವೇಳೆ ನಡೆದ ಡಾ|| ಲಲಿತಾ ಹಳೇಕೋಟೆ ಕುಮಾರ್ ಮತ್ತು ಹಳಸೇ ಭೈರೇಗೌಡ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಗರದಾಚೆಯ ಸಾಂಸ್ಕøತಿಕ ಚಟುವಟಿಕೆಗಳು ವಿಷಯ ಕುರಿತು ಸಾಹಿತಿ ಡಾ|| ಬೆಳವಾಡಿ ಮಂಜುನಾಥ್ ಹಾಗೂ ಪೂರ್ಣಚಂದ್ರ ತೇಜಸ್ವಿ ಸಾಹಿತ್ಯದಲ್ಲಿ ದೇಶೀಯ ಪ್ರಜ್ಞೆ ವಿಷಯ ಕುರಿತು ಡಾ|| ಹೆಚ್.ಎಸ್.ಸತ್ಯನಾರಾಯಣ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಾಹಿತ್ಯದ ಪುಸ್ತಕಗಳನ್ನೂ ಓದಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು, ದತ್ತಿದಾನಿ ಹಳಸೇ ಶಿವಣ್ಣ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ, ಖಜಾಂಚಿ ಪ್ರೊ|| ಕೆ.ಎನ್.ಲಕ್ಷ್ಮೀಕಾಂತ್, ಜಾಗರ ಹೋಬಳಿ ಕಸಾಪ ಖಜಾಂಚಿ ಚಂದ್ರಯ್ಯ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಒಳ್ಳೆಯದು ಮತ್ತು ಒಳ್ಳೆಯವರನ್ನು ಗುರುತಿಸುವ ಕೆಲಸವನ್ನು ಇಂದಿನ ಯುವ ಪೀಳಿಗೆ ಮಾಡಬೇಕು: ಶ್ರೀಕಂಠ...










