ಚಿಕ್ಕಮಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಸೂರಿ ಶ್ರೀನಿವಾಸ್ ನಾಮಪತ್ರ ಸಲ್ಲಿಕೆ…

193
firstsuddi

ಚಿಕ್ಕಮಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮೇ.9 ರಂದು ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಯಾಗಿ ಕಾದಂಬರಿಕಾರ. ಸಾಹಿತಿ ದಿ|| ಅಜ್ಜಂಪುರ ಜಿ.ಸೂರಿ ಅವರ ಪುತ್ರ ಸೂರಿ ಶ್ರೀನಿವಾಸ್ ಇಂದು ನಾಮಪತ್ರ ಸಲ್ಲಿಸಿದರು.

ಕುಟುಂಬ ವರ್ಗ ಮತ್ತು ಅಭಿಮಾನಿಗಳೊಂದಿಗೆ ಬೆಳಿಗ್ಗೆ ತಾಲ್ಲೂಕು ಕಛೇರಿ ಮುಂಭಾಗದ ಶ್ರೀ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಚುನಾವಣಾಧಿಕಾರಿ ಜಿ.ಪಿ.ಚೇತನ್ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ನಂತರ ತಾಲ್ಲೂಕು ಕಛೇರಿ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಕನ್ನಡ ಸಾಹಿತ್ಯ ಪರಿಷತ್ತನ್ನು ಹೋಬಳಿ ಮಟ್ಟದಿಂದ ಹಳ್ಳಿಗಳಿಗೂ ವಿಸ್ತರಿಸಿ ಪ್ರತಿ ಗ್ರಾಮಗಳ ಮನೆ ಮನೆಗೂ ಪರಿಚಯಿಸುವುದು ತಮ್ಮ ಕನಸಾಗಿದೆ ಎಂದರು.

ತಾವು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ನಂತರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಯಲ್ಲಿ ನಡೆಸಲು ಪ್ರಯತ್ನಿಸಲಾಗುವುದು. ಉದಯೋನ್ಮುಖ ಬರಹಗಾರರಿಗೆ ವೇದಿಕೆ ಕಲ್ಪಿಸಲಾಗುವುದು, ತಮ್ಮ ತಂದೆಯವರಂತೆ ಪ್ರತಿ ತಾಲ್ಲೂಕು ಹೋಬಳಿ ಮತ್ತು ಗ್ರಾಮಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಮತ್ತು ಯುವ ಜನತೆಯಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಥಾ ಕಮ್ಮಟ, ಕಾವ್ಯ ಕಮ್ಮಟಗಳನ್ನು ಆಯೋಜಿಸಲಾಗುವುದು. ಜಿಲ್ಲೆಯ ಸಾಹಿತಿಗಳ ಮಾಹಿತಿ ಕೋಶ, ಕಥಾ ಸಂಕಲನ, ಕವನ ಸಂಕಲನಗಳನ್ನು ಹೊರ ತರಲಾಗುವುದು ಎಂದು ಹೇಳಿದರು.

ಜಿಲ್ಲಾದ್ಯಂತ ಈ ಬಾರಿ ತಮ್ಮ ಪರವಾದ ಅಲೆಯಿದ್ದು, ತಾವು ಆರಿಸಿ ಬಂದಲ್ಲಿ ನಾಡು ನುಡಿಯ ಸೇವೆಗಾಗಿ ಕಾಯ, ವಾಚಾ, ಮನಸಾ ದುಡಿಯುವುದಾಗಿ ಭರವಸೆ ನೀಡಿದರು.

ಎ.ಸಿ.ಚಂದ್ರಪ್ಪ, ಹೆಚ್.ಎಸ್.ಪುಟ್ಟೇಗೌಡ, ಮೋಹಿನಿ ಸಿದ್ದೇಗೌಡ, ಗಂಗಾಧರ ನಾಯಕ್, ಸಾಹಿತಿ ಭಗವಾನ್, ಚಂದ್ರಕಲಾ, ಲಕ್ಷ್ಮೀ ಶಾಮರಾವ್, ಮಂಜುನಾಥ್ ಕಾಮತ್, ಹಾತೂರು ಪ್ರಭಾಕರ್, ಜುಬೇದಾ, ಗಣೇಶ್ ಹೆಗ್ಗಡೆ, ಮಗ್ಗಲಮಕ್ಕಿ ಗಣೇಶ್, ಪತ್ರಕರ್ತರಾದ ಚಿ.ಸ.ಪ್ರಭುಲಿಂಗ ಶಾಸ್ತ್ರಿ, ಭೋಜೇಗೌಡ, ಮ್ಯಾಥ್ಯೂ, ಉಪನ್ಯಾಸಕ ಅಶೋಕ್ ಹಾಜರಿದ್ದರು.