ಚಿಕ್ಕಮಗಳೂರು : ಕುಡಿಯುವ ನೀರು ಮತ್ತು ಇಂಧನವನ್ನು ಸಾರ್ವಜನಿಕರು ಮಿತವಾಗಿ ಬಳಸಬೇಕು : ಭಾರತಮ್ಮ ಪ್ರಹ್ಲಾದ್.

203
firstsuddi

ಚಿಕ್ಕಮಗಳೂರು : ಕುಡಿಯುವ ನೀರು ಮತ್ತು ಇಂಧನವನ್ನು ಸಾರ್ವಜನಿಕರು ಮಿತವಾಗಿ ಬಳಸಬೇಕು ಎಂದು ಕಡೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಮ್ಮ ಪ್ರಹ್ಲಾದ್ ಹೇಳಿದರು.
ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ದಿ ಸಂಸ್ಥೆ ಹಾಗೂ ಇಂಟಿಗ್ರೇಟೆಡ್ ಕಮ್ಯೂನಿಟಿ ಡೆವೆಲಪ್‍ಮೆಂಟ್ ಸೊಸೈಟಿ ಕಡೂರಿನ ತಾ.ಪಂ. ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ನವೀಕರಿಸಬಹುದಾದ ಇಂಧನ, ಮಳೆನೀರು ಕೊಯ್ಲು ಮತ್ತು ಘನತ್ಯಾಜ್ಯ ನಿರ್ವಹಣೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ, ಜನಸಂಖ್ಯೆ ಮಿತಿಮೀರುತ್ತಿರುವುದರಿಂದಾಗಿ ನೀರು ಮತ್ತು ಇಂಧನದ ಬಳಕೆ ಹೆಚ್ಚುತ್ತಿದೆ ಎಂದ ಅವರು ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಕುಡಿಯವ ನೀರು ಮತ್ತು ಇಂಧನದ ಕೊರತೆ ಎದುರಾಗುತ್ತದೆ ಎಂದು ಎಚ್ಚರಿಸಿದರು.
ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮೀಣರಿಗೆ ಇದನ್ನು ಮನವರಿಕೆ ಮಾಡಬೇಕು, ನೀರಿನ ಮಿತಬಳಕೆ ಮಾಡುವಂತೆ ಗ್ರಾಮಸ್ಥರ ಮನವೊಲಿಸಬೇಕು ಎಂದು ಸೂಚಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಟಿಗ್ರೇಟೆಡ್ ಕಮ್ಯೂನಿಟಿ ಡೆವೆಲಪ್‍ಮೆಂಟ್ ಸೊಸೈಟಿಯ ಅಧ್ಯಕ್ಷ ಜೆ.ವಿನಾಯಕ ನೀರು ಮತ್ತು ಇಂಧನದ ಮಿತಬಳಕೆ ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ದಿ ಸಂಸ್ಥೆಯ ನಿರ್ದೇಶಕ ರವಿಕುಮಾರ್, ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ವಿಜಯಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ಸೌಮ್ಯ, ಸುಧಾ, ಸುಬ್ರಹ್ಮಣ್ಯ ಉಪಸ್ಥಿತರಿದ್ದರು.
ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಸದಸ್ಯರು ಮತ್ತು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.