ಚಿಕ್ಕಮಗಳೂರು : ಕೊರೊನಾ ಮಹಾಮಾರಿಯಿಂದ ದೇಶದ ಜನತೆಯನ್ನು ರಕ್ಷಿಸಲು ಕೇಂದ್ರ ಸರ್ಕಾರ ಸರ್ವಪ್ರಯತ್ನವನ್ನೂ ಮಾಡುತ್ತಿದೆ : ಶಾಸಕ ಸಿ.ಟಿ.ರವಿ.

128
firstsuddi

ಚಿಕ್ಕಮಗಳೂರು : ಕೊರೊನಾ ಮಹಾಮಾರಿಯಿಂದ ದೇಶದ ಜನತೆಯನ್ನು ರಕ್ಷಿಸಲು ಕೇಂದ್ರ ಸರ್ಕಾರ ಸರ್ವಪ್ರಯತ್ನವನ್ನೂ ಸಮರೋಪಾದಿಯಲ್ಲಿ ಮಾಡುತ್ತಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ನಗರದ ಲಯನ್ಸ್ ಸೇವಾ ಭವನದಲ್ಲಿ ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಜಾನಪದ ಕಲಾವಿದರಿಗೆ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಘಟಕ ನೀಡಿದ ಪಡಿತರ ಕಿಟ್ ಗಳನ್ನು ನಿನ್ನೆ ವಿತರಿಸಿ ಅವರು ಮಾತನಾಡಿದರು.

ಕೊರೊನಾ ಸೋಂಕಿನಿಂದ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಒಂದೇ ವರ್ಷದೊಳಗೆ ಎರಡು ಕೋವಿಡ್ ಲಸಿಕೆಯನ್ನು ಕಂಡು ಹಿಡಿದ ಮೊದಲ ದೇಶ ನಮ್ಮದು, ರಷ್ಯಾ ಮತ್ತು ಅಮೆರಿಕಾದಲ್ಲಿ ಕೇವಲ ಒಂದೇ ಲಸಿಕೆಯನ್ನು ಕಂಡು ಹಿಡಿಯಲಾಗಿದೆ. ಮೂರನೇ ಲಸಿಕೆಯನ್ನು ಕಂಡು ಹಿಡಿಯುವಲ್ಲಿ ಕೇಂದ್ರ ಸರ್ಕಾರ ದಾಪುಗಾಲು ಹಾಕಿದೆ ಎಂದು ತಿಳಿಸಿದರು.

ದೇಶದಲ್ಲಿ ಇದೂವರೆಗೆ 25ಕೋಟಿ ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದ್ದು, 140 ಕೋಟಿ ಜನರಿಗೂ ಹಾಕುವ ಪ್ರಯತ್ನ ನಡೆದಿದೆ. ಒಂದು ವರ್ಷದ ಹಿಂದೆ ಮಾಸ್ಕ್ ನಮ್ಮಗೆ ವಿದೇಶದಿಂದ ಬರಬೇಕಿತ್ತು. ಪಿಪಿಇ ಕಿಟ್‍ನ್ನು ನಾವು ಕಂಡೇ ಇರಲಿಲ್ಲ ಎಂದ ಅವರು, ಪ್ರಸ್ತುತ ಮಾಸ್ಕ್ ಮತ್ತು ಪಿಪಿಇ ಕಿಟ್ ಗಳನ್ನು ನಾವೇ ತಯಾರಿಸಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದೆವೆ ಎಂದು ಹೇಳಿದರು.

ಅಮೇರಿಕಾದಲ್ಲಿ ಆರೂವರೆ ಲಕ್ಷ ಜನ ಕೊರೊನಾದಿಂದ ಸಾವನಪ್ಪಿದ್ದಾರೆ. 74ಕೋಟಿ ಜನಸಂಖ್ಯೆ ಇರುವ ಯುರೋಪ್ ದೇಶಗಳಲ್ಲಿ 10ಲಕ್ಷ ಜನ ಅಸುನೀಗಿದ್ದಾರೆ. ಆದರೆ ಕೇಂದ್ರ ಸರ್ಕಾರದ ಅವಿರತ ಪ್ರಯತ್ನದಿಂದಾಗಿ ನಮ್ಮಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ. ಜಿಲ್ಲೆಯಲ್ಲೂ ಸಹ ಸಾವಿನ ಪ್ರಮಾಣ ಶೇ.1 ಕ್ಕಿಂತ ಕಡಿಮೆ ಇದೆ ಎಂದು ತಿಳಿಸಿದರು.

ಸಂಕಷ್ಟ ಕಾಲದಲ್ಲಿ ಕಲಾವಿದರಿಗೆ ನೆರವು ನೀಡುತ್ತಿರುವ ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದ ಅವರು, ಪಡಿತರದ ಕೊರತೆಯಾದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಮುಗುಳಿ ಲಕ್ಷ್ಮೀದೇವಮ್ಮ ಮಾತನಾಡಿ, ಲಾಕ್‍ಡೌನ್‍ನಿಂದಾಗಿ ಕಾರ್ಯಕ್ರಮಗಳಿಲ್ಲದೇ ಸಂಕಷ್ಟದಲ್ಲಿರುವ ಜಾನಪದ ಕಲಾವಿದರಿಗೆ ಸರ್ಕಾರದಿಂದ ಹೆಚ್ಚಿನ ನೆರವು ಒದಗಿಸಿಕೊಡುವಂತೆ ಶಾಸಕರಿಗೆ ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್‍ನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಪರಿಷತ್‍ನ ರಾಜ್ಯಾಧ್ಯಕ್ಷ ಟಿ.ತಿಮ್ಮೇಗೌಡ ಅವರು ನೀಡಿರುವ 50 ಸಾವಿರ ರೂ. ಅನುದಾನದಿಂದ ಈ ಪಡಿತರ ಕಿಟ್‍ಗಳನ್ನು ವಿತರಿಸಲಾಗುತ್ತಿದ್ದು ಹೆಚ್ಚುವರಿ ಪಡಿತರವನ್ನು ಆಶಾಕಿರಣ ಅಂಧಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮತ್ತು ಕಲಾ ಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್ ನೀಡಿದ್ದಾರೆ ಎಂದು ತಿಳಿಸಿದರು.

ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಹಿರಿಗಯ್ಯ, ಜಾನಪದ ಅಕಾಡೆಮಿ ಮಾಜಿ ಸದಸ್ಯ ರಂಗಸ್ವಾಮಿ, ಹಿರಿಯ ವೀರಗಾಸೆ ಕಲಾವಿದ ಕೆ.ಸಿ.ಬಸವರಾಜಪ್ಪ, ಕಲಾವಿದೆ ಪುಷ್ಪಾ ಉಪಸ್ಥಿತರಿದ್ದರು.