ಚಿಕ್ಕಮಗಳೂರು : ಗ್ರಾಮ ಪಂಚಾಯತಿ ಚುನಾವಣೆಗೆ ಯಾರಾದರೂ ಹೋಬಳಿಯಲ್ಲಿ ನಾಮಪತ್ರ ಸಲ್ಲಿಸಿದರೆ ಅವರಿಗೆ ಹಾರ ಹಾಕಿ ಅಂತವರ ಮನೆ ಮುಂದೆ ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿರುವ ಘಟನೆ ಜಿಲ್ಲೆಯ ಖಾಂಡ್ಯ ಹೋಬಳಿಯಲ್ಲಿ ನಡೆದಿದೆ. ಖಾಂಡ್ಯ ಹೋಬಳಿಯ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಆನ್ಲೈನ್ ಸೇರಿದಂತೆ ಯಾವುದೇ ವಿಧದಲ್ಲೂ ಯಾರೂ ಕೂಡ ನಾಮಪತ್ರ ಸಲ್ಲಿಸಬಾರದು ಎಂದು ಖಾಂಡ್ಯ ನಾಗರೀಕ ಹಿತರಕ್ಷಣಾ ವೇದಿಕೆ ಹಾಗೂ ಸಾರ್ವಜನಿಕರು ಸೂಚಿಸಿದ್ದಾರೆ. ಶತಮಾನಗಳ ಬದುಕೆ ಬೀದಿಗೆ ಬೀಳುವಾಗ ಚುನಾವಣೆ ಬೇಕೇ ಎಂಬ ಪ್ರಶ್ನೆ ಗ್ರಾಮದ ಜನರಲ್ಲಿ ಮೂಡಿದೆ. ಈಗಾಗಲೇ ಮಲೆನಾಡಿಗರ ಬದುಕಿನ ಮೇಲೆ ಹುಲಿ ಯೋಜನೆ, ಬಫರ್ ಜ್ಹೋನ್, ಕಸ್ತೂರಿ ರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ವಲಯದ ತೂಗುಗತ್ತಿ ತೂಗುತ್ತಿದೆ. ಸರ್ಕಾರದ ಈ ಯೋಜನೆಗಳಿಂದ ಜಿಲ್ಲೆಯ ಮಲೆನಾಡು ಭಾಗದ ನೂರಾರು ಗ್ರಾಮಗಳೇ ಕಣ್ಮರೆಯಾಗಲಿವೆ. ಹಾಗಾಗಿ, ಮಲೆನಾಡಿಗರು ಚುನಾವಣಾ ಬಹಿಷ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ. ಖಾಂಡ್ಯ ಹೋಬಳಿಯ ಕಡವಂತಿ, ಹುಯಿಗೆರೆ, ದೇವದಾನ ಹಾಗೂ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಈಗಾಗಲೇ ಅಲ್ಲಲ್ಲೇ ಬ್ಯಾನರ್ ಕಟ್ಟಿದ್ದು, ಚುನಾವಣೆಗಿಂತ ಬದುಕು ದೊಡ್ಡದ್ದಾಗಿ ಇರುವುದರಿಂದ ಮಲೆನಾಡಲ್ಲಿ ಚುನಾವಣೆ ಬಹಿಷ್ಕಾರದ ಕೂಗು ಜೋರಾಗಿದೆ.










