ಚಿಕ್ಕಮಗಳೂರು : ಟಿಪ್ಪುಸುಲ್ತಾನ್ ಅವರನ್ನು ಮುಸ್ಲಿಂ ಎಂಬ ಕಾರಣಕ್ಕೆ ಹಿಂದು ವಿರೋಧಿ ಎಂದು ಬಿಂಬಿಸುವುದು ಸರಿಯಲ್ಲ : ಕೆ.ಟಿ.ರಾಧಾಕೃಷ್ಣ.

222
firstsuddi

ಚಿಕ್ಕಮಗಳೂರು : ಮೈಸೂರು ಹುಲಿ ಟಿಪ್ಪುಸುಲ್ತಾನ್ ಅವರನ್ನು ಕೇವಲ ಮುಸ್ಲಿಂ ಎಂಬ ಕಾರಣಕ್ಕೆ ಹಿಂದು ವಿರೋಧಿ ಎಂದು ಬಿಂಬಿಸುವುದು ಸರಿಯಲ್ಲ ಎಂದು ಬಿ.ಎಸ್.ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು.
ನಗರದ ಬಿ.ಎಸ್.ಪಿ ಕಛೇರಿಯಲ್ಲಿ ನಡೆದ ಮೈಸೂರು ಹುಲಿ ಟಿಪ್ಪುಸುಲ್ತಾನ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಟಿಪ್ಪುಸುಲ್ತಾನ್ ಬ್ರಿಟೀಷರ ವಿರುದ್ಧ ನಾಡಿನ ರಕ್ಷಣೆಗಾಗಿ ಹೋರಾಡಿದ ಓರ್ವ ಅಪ್ರತಿಮ ದೇಶ ಭಕ್ತ. ಮೈಸೂರು ರಾಜ್ಯ ಕಂಡ ಶ್ರೇಷ್ಠ ದೊರೆ. ನಾಡಿನಾದ್ಯಂತ ಹಲವು ದೇವಾಲಯಗಳು ಮತ್ತು ಮಠ ಮಂದಿರಗಳನ್ನು ದಾಳಿ ಕೋರರಿಂದ ರಕ್ಷಿಸುವುದರ ಜೊತೆಗೆ ಅವುಗಳಿಗೆ ಉದಾರವಾಗಿ ದಾನ ನೀಡಿದ ಧರ್ಮಬೀರು ಎಂದು ತಿಳಿಸಿದರು.
ಟಿಪ್ಪುಸುಲ್ತಾನ್ ತನ್ನ ಆಡಳಿತಾವಧಿಯಲ್ಲಿ ನಿರ್ಗತಿಕ ಮತ್ತು ಶೋಷಿತ ವರ್ಗಕ್ಕೆ ಬಹಳಷ್ಟು ನೆರವು ನೀಡುವ ಮೂಲಕ ಬದುಕು ಕಟ್ಟಿಕೊಟ್ಟಿದ್ದಾನೆ ಅದನ್ನು ಸಹಿಸದ ಮೇಲ್ವರ್ಗದವರು ಅವನನ್ನು ಮತಾಂದ ಎಂದು ಬಿಂಬಿಸುತ್ತಿದ್ದಾರೆ ಎಂದ ಅವರು ಅಪ್ರತಿಮ ದೇಶ ಭಕ್ತನನ್ನು ಚರಿತ್ರೆಯಿಂದ ತೆಗೆದು ಹಾಕುವುದು ಖಂಡನೀಯ ಎಂದರು.
ಬಿ.ಎಸ್.ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ ಮಾತನಾಡಿ ಶೃಂಗೇರಿ ದೇವಾಲಯದ ಮೇಲೆ ಮರಾಠ ಪೇಶ್ವೆಗಳು ದಾಳಿ ಮಾಡಿದಾಗ ಅವರನ್ನು ಹೊಡೆದೋಡಿಸಿ ಮಠವನ್ನು ರಕ್ಷಿಸಿದ್ದು ಟಿಪ್ಪುಸುಲ್ತಾನ್ ಎಂದು ಹೇಳಿದರು.
ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ ಸುಧಾ ಮಾತನಾಡಿ ದೇಶಭಕ್ತರ ಜಯಂತಿಯನ್ನು ಧರ್ಮದ ಆಧಾರದ ಮೇಲೆ ಆಚರಿಸಲು ಮುಂದಾಗಿರುವುದು ವಿಷಾದನೀಯ ಎಂದರು.
ಟಿಪ್ಪುಸುಲ್ತಾನ್ ಅವರ ಭಾವ ಚಿತ್ರಕ್ಕೆ ಸಮಾರಂಭದಲ್ಲಿ ಸಾಮೂಹಿಕವಾಗಿ ಪುಷ್ಪ ನಮನ ಸಲ್ಲಿಸಲಾಯಿತು. ಬಿ.ಎಸ್.ಪಿ ನಗರಾಧ್ಯಕ್ಷ ಹನುಮಂತರಾಯ ಕಾರ್ಯದರ್ಶಿ ವಿನೂತ್, ಖಜಾಂಚಿ ನವೀನ್, ಎ.ಪಿ ಸುರೇಶ್, ಕೆ.ಎಸ್ ಮಂಜುಳ, ವಿಜಯಕುಮಾರ್, ಉಪಸ್ಥಿತರಿದ್ದರು.