ಚಿಕ್ಕಮಗಳೂರು : ದಲಿತರು ವಾಸಿಸುತ್ತಿರುವ ಭೂಮಿಗೆ ನಿವೇಶನ ಹಕ್ಕು ಪತ್ರ ನೀಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಒತ್ತಾಯ…

170
firstsuddi

ಚಿಕ್ಕಮಗಳೂರು : ತರೀಕೆರೆ ತಾಲ್ಲೂಕಿನ ಬೇಲೇನಹಳ್ಳಿ ಮತ್ತು ಹುರುಳಿಹಳ್ಳಿಯ ದಲಿತರು ವಾಸಿಸುತ್ತಿರುವ ಭೂಮಿಗೆ ನಿವೇಶನ ಹಕ್ಕು ಪತ್ರ ನೀಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಡಾ|| ಬಗಾಧಿ ಗೌತಮ್ ಅವರನ್ನು ಗ್ರಾಮಸ್ಥರೊಂದಿಗೆ ಇಂದು ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಬೇಲೇನಹಳ್ಳಿ ಮತ್ತು ಹುರುಳಿಹಳ್ಳಿಯ ದಲಿತರು ಬೇಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 73 ರಲ್ಲಿ ಹಲವು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ, ಅವರಿಗೆ ನಿವೇಶನ ಹಕ್ಕು ಪತ್ರ ಇಲ್ಲದಿರುವುದರಿಂದಾಗಿ ಅಭದ್ರತೆ ಕಾಡುತ್ತಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ನಿವೇಶನ ಹಕ್ಕು ಪತ್ರವನ್ನು ನೀಡಬೇಕು, ರಾಜೀವ್ ಗಾಂಧಿ ವಸತಿ ನಿಗಮ ಅಥವಾ ಅಂಬೇಡ್ಕರ್ ನಿವಾಸ್ ಯೋಜನೆಯಡಿ ಅವರಿಗೆ ಮನೆ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಬೇಲೇನಹಳ್ಳಿಯ ಗ್ರಾಮಸ್ಥರು ಹೆಚ್.ತಿಮ್ಮಾಪುರದ ಸರ್ವೆ ನಂ.26 ರ 5 ಎಕರೆ ಪ್ರದೇಶದಲ್ಲಿ ಹಲವು ವರ್ಷಗಳಿಂದ ಶವ ಸಂಸ್ಕಾರ ನಡೆಸುತ್ತಿದ್ದು, ಆ ಹಿನ್ನೆಲೆಯಲ್ಲಿ ಆ ಜಾಗವನ್ನು ಸ್ಮಶಾನಕ್ಕೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್.ವೆಂಕಟೇಶ್, ತಾಲ್ಲೂಕು ಸಂಘಟನಾ ಸಂಚಾಲಕ ಎನ್.ಸಿದ್ದಪ್ಪ, ಗ್ರಾಮ ಸಂಚಾಲಕರಾದ ನವೀನ್ ಕುಮಾರ್, ಸಂತೋಷ್, ಅಭಿಲಾಷ್ ಹಾಜರಿದ್ದರು.