ಚಿಕ್ಕಮಗಳೂರು : ದೇಶದ ಜನ ನಂಬಿಕೆಗಳ ಹಿಂದಿರುವ ಮೂಢನಂಬಿಕೆಗಳಿಂದ ಹೊರ ಬರದಿದ್ದರೆ ರಾಷ್ಟ್ರ ಮುಂದುವರೆಯಲು ಸಾಧ್ಯವಿಲ್ಲ ಎಂದು ಅರಣ್ಯ ಮತ್ತು ವಸತಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.
ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಇಕೋ ಕ್ಲಬ್ ಇಂದು ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶದ ಜನರಲ್ಲಿ ಅನೇಕ ನಂಬಿಕೆಗಳಿವೆ ಅವುಗಳ ಹಿಂದೆ ಸಾಕಷ್ಟು ಮೂಢನಂಬಿಕೆಗಳಿವೆ ಅವುಗಳಿಗೆ ಜನ ಜೋತು ಬಿದ್ದಿರುವುದರಿಂದಾಗಿ ರಾಷ್ಟ್ರದ ಪ್ರಗತಿಗೆ ಹಿನ್ನಡೆಯಾಗಿದೆ ಹಾಗಾಗಿ ನಮ್ಮ ಜನ ಅವುಗಳಿಂದ ಹೊರ ಬಂದು ವೈಜ್ಞಾನಿಕ ಮನೋಭಾವ ಮತ್ತು ವೈಜ್ಞಾನಿಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನಮ್ಮ ಮಕ್ಕಳು ನಂಬಿಕೆಗಳ ಹಿಂದಿರುವ ಮೂಢನಂಬಿಕೆಗಳನ್ನು ಮನಗಾಣಬೇಕು, ವೈಜ್ಞಾನಿಕ ಮನೋಭಾವವನ್ನು ಮತ್ತು ಚಿಂತನೆಯನ್ನು ಮೈಗೂಡಿಸಿಕೊಂಡು ಅನ್ವೇಷಕರಾಗಬೇಕು, ವಿಜ್ಞಾನಿಗಳಾಗಬೇಕು, ಮನುಕುಲಕ್ಕೆ ಒಳಿತಾಗುವಂತಹ ಅವಿಷ್ಕಾರಗಳನ್ನು ಮಾಡಬೇಕು ಎಂದು ಸಲಹೆ ಮಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿಆರ್‍ಪಿ ಪ್ರಶಾಂತ್ ನಾಯಕ್ ಮಾತನಾಡಿ ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇಕೋ ಕ್ಲಬ್‍ನ ಮಾರ್ಗದರ್ಶಿ ಶಿಕ್ಷಕ ಎಸ್.ಈ.ಲೋಕೇಶ್ವರಾಚಾರ್ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಕ್ಲಬ್‍ನಿಂದ ವಿವಿಧ ಸ್ಪರ್ಧೆಗಳು, ಪರಿಸರ ಜಾಥಾ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನದ ಮಾದರಿಗಳನ್ನು ಸಮಾರಂಭದಲ್ಲಿ ಪ್ರದರ್ಶಿಸಲಾಗಿತ್ತು, ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ ಅಧ್ಯಕ್ಷತೆ ವಹಿಸಿದ್ದರು, ಶಿಕ್ಷಕರಾದ ನಾಗವೇಣಿ, ಸಾವಿತ್ರಿ, ಜಯಂತಿ ಉಪಸ್ಥಿತರಿದ್ದರು.










