ಚಿಕ್ಕಮಗಳೂರು : ನಗರದ ಬೇಲೂರು ರಸ್ತೆ ಮತ್ತು ತಿಲಕ್ ಪಾರ್ಕ್ ಬಳಿ ನಗರ ಸಭೆಯಿಂದ ಸದ್ಯದಲ್ಲೇ ಫುಡ್ ಕೋರ್ಟ್ ನಿರ್ಮಿಸಲಾಗುವುದು : ಬಸವರಾಜ್.

175

ಚಿಕ್ಕಮಗಳೂರು : ನಗರದ ಬೇಲೂರು ರಸ್ತೆ ಮತ್ತು ತಿಲಕ್ ಪಾರ್ಕ್ ಬಳಿ ನಗರ ಸಭೆಯಿಂದ ಸದ್ಯದಲ್ಲೇ ಫುಡ್ ಕೋರ್ಟ್ ನಿರ್ಮಿಸಲಾಗುವುದು ಎಂದು ಪೌರಾಯುಕ್ತ ಬಸವರಾಜ್ ಹೇಳಿದರು.
ನಗರದ ಆದಿಭೂತಪ್ಪ ದೇವಾಲಯದ ಸಭಾಂಗಣದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ವಿಜಯಪುರ ತಿಂಡಿಗಾಡಿ ಮಾಲೀಕರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಫುಡ್‍ಕೋರ್ಟ್ ನಿರ್ಮಾಣದಿಂದಾಗಿ ಬೀದಿ ಬದಿ ತಿಂಡಿಗಾಡಿ ವ್ಯಾಪಾರಿಗಳಿಗೆ ಖಾಯಂ ನೆಲೆ ದೊರೆತಂತಾಗುತ್ತದೆ ಎಂದ ಅವರು ಜಿಲ್ಲಾಧಿಕಾರಿಗಳು ಈಗಾಗಲೇ ಫುಡ್‍ಕೋರ್ಟ್ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದರು.
ಕುಡಿಯುವ ನೀರು, ಗ್ಯಾಸ್ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನೂ ನಗರಸಭೆಯಿಂದ ಕಲ್ಪಿಸುವ ಮೂಲಕ ಸುಸಜ್ಜಿತವಾದ ಫುಡ್‍ಕೋರ್ಟ್ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಬಹಳ ಹಿಂದಿನಿಂದ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು ಗುರುತಿಸಿ ಅವರಿಗೆ ನಗರಸಭೆಯಿಂದ ಸ್ಮಾರ್ಟ್‍ಕಾರ್ಡ್, ಗುರುತಿನ ಚೀಟಿ ನೀಡಲಾಗುವುದು ಎಂದು ಹೇಳಿದರು.
ನಗರಸಭೆಯ ಸಮುದಾಯ ಸಂಘಟನಾ ಅಧಿಕಾರಿ ಕಲಾವತಿ ಮಾತನಾಡಿ 2014 ರಲ್ಲಿ ಬೀದಿ ಬದಿ ವ್ಯಾಪಾರಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಅದು ಅನುಮೋದನೆಯಾಗಿ ಬಂದಿದೆ ಆ ಪಟ್ಟಿ ಪ್ರಕಾರ ಕೇಂದ್ರ ಸರ್ಕಾರದ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ಒದಗಿಸಲಾಗುವುದು, ಮುಂದಿನ ದಿನಗಳಲ್ಲಿ ಅವರಿಗೆ ಪಿಂಚಣಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ತಿಲಕ್ ಪಾರ್ಕ್ ಬಳಿಯ ತಿಂಡಿ ಗಾಡಿ ಮಾಲೀಕರಿಗೆ ಸಮಾರಂಭದಲ್ಲಿ ಗುರುತಿನ ಚೀಟಿ ವಿತರಿಸಲಾಯಿತು. ಹಿರಿಯ ತಿಂಡಿ ಗಾಡಿ ಮಾಲೀಕರನ್ನು ಸನ್ಮಾನಿಸಲಾಯಿತು.
ವಿಜಯಪುರ ತಿಂಡಿ ಗಾಡಿ ಮಾಲೀಕರ ಸಂಘದ ಅಧ್ಯಕ್ಷ ಮಹೇಶ್ ಅಧ್ಯಕ್ಷತೆ ವಹಿಸಿದ್ದರು, ನಗರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್, ತಿಂಡಿಗಾಡಿ ಮಾಲೀಕರ ಸಂಘದ ನಗರಾಧ್ಯಕ್ಷ ಸುಹಾಸ್, ಸಾಯಿಚರಣ್ ಉಪಸ್ಥಿತರಿದ್ದರು