ಚಿಕ್ಕಮಗಳೂರು : ನಾಡು, ನುಡಿ, ನೆಲ, ಜಲ, ಪರಿಸರ ಮತ್ತು ಸಂಸ್ಕೃತಿಯನ್ನು ಉಳಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ ಎಂದು ಐಡಿಎಸ್ಜಿ ಕಾಲೇಜಿನ ಪ್ರಾಚಾರ್ಯ ಡಾ|| ಎಸ್.ಇ.ನಟರಾಜ್ ಹೇಳಿದರು.
ಜಿಲ್ಲಾ ಕಸಾಪ ನಗರದ ಐಡಿಎಸ್ಜಿ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಕುಂದೂರು ಭದ್ರಮ್ಮ ಕಲ್ಲೇಗೌಡ, ದಿ|| ರಾಜು ಮತ್ತು ಜಾನಕಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಡು, ನುಡಿ, ನಮ್ಮ ಸಂಸ್ಕೃತಿ ಮತ್ತು ಪರಿಸರ ಉಳಿಯಬೇಕಾದರೆ ಶಾಲಾ ಕಾಲೇಜುಗಳಲ್ಲಿ ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚು ನಡೆಸಬೇಕು ಆ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದು ಸಲಹೆ ಮಾಡಿದರು.
ಕನ್ನಡ ಭಾಷೆಯ ಅಳಿವು-ಉಳಿವು ವಿಷಯ ಕುರಿತು ಉಪನ್ಯಾಸ ನೀಡಿದ ಸಹಾಯಕ ಪ್ರಾಧ್ಯಾಪಕ ಡಾ|| ಕೆ.ಎಂ.ಜಗಧೀಶ್ ಕನ್ನಡ ಜೀವಂತ ಭಾಷೆ ಅದು ಅಳಿಯಲು ಸಾಧ್ಯವಿಲ್ಲ, ಕನ್ನಡ ಭಾಷೆ ಬೆಂಗಳೂರಿನಲ್ಲಿ ಕಣ್ಮರೆಯಾಗುತ್ತಿದೆ ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಜೀವಂತವಾಗಿದೆ ಎಂದರು.
ಪ್ರಾಧ್ಯಾಪಕ ಪ್ರೊ|| ಯು.ಸಿ.ಮಹೇಶ್ ಲಾವಣಿಗಳನ್ನು ಸ್ವತಃ ಹಾಡುವುದರ ಜೊತೆಗೆ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಯಲ್ಲಿ ಅವುಗಳ ಪಾತ್ರವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಕರ್ನಾಟಕದ ಏಕೀಕರಣವಾಗಿ 60 ವರ್ಷಗಳು ಕಳೆದರೂ ಇನ್ನೂ ಪ್ರತ್ಯೇಕತೆಯ ಕೂಗು ಕೇಳಿ ಬರುತ್ತಿರುವುದು ದುರಂತ, ಇಂತಹ ಸಂದರ್ಭದಲ್ಲಿ ಕನ್ನಡಿಗರು ಸ್ವಾಭಿಮಾನದಿಂದ ನಾಡನ್ನು ಉಳಿಸಬೇಕು ಎಂದು ಮನವಿ ಮಾಡಿದರು.
ದತ್ತಿ ದಾನಿ ಲೆಕ್ಕಪರಿಶೋಧಕ ಆರ್.ರವಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ, ಖಜಾಂಚಿ ಪ್ರೊ|| ಕೆ.ಎನ್.ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ನಮ್ಮ ಸಂಸ್ಕøತಿ ಮತ್ತು ಪರಿಸರವನ್ನು ಉಳಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ :...










