ಚಿಕ್ಕಮಗಳೂರು : ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದಿಂದ ಮೂಡಿಗೆರೆ ತಾಲ್ಲೂಕಿನಲ್ಲಿ ಮನೆ ಕಳೆದುಕೊಂಡಿರುವ ನಿರಾಶ್ರಿತ ಕುಟುಂಬಗಳಿಗೆ ನಗರದ ಇನ್ನರ್ ವೀಲ್ ಕ್ಲಬ್, ಲಯನ್ಸ್ ಕ್ಲಬ್, ಪೂರ್ವಿ ಸುಗಮ ಸಂಗೀತ ಅಕಾಡೆಮಿ ಮತ್ತು ಯುರೇಕಾ ಅಕಾಡೆಮಿ ನೆರವಿನ ಹಸ್ತ ಚಾಚಿವೆ.
ಪ್ರಕೃತಿ ವಿಕೋಪ ಸಂಭವಿಸಿದ ವೇಳೆ ಸ್ಥಳಕ್ಕೆ ತೆರಳಿ ಪರಿಹಾರ ಸಾಮಾಗ್ರಿಯನ್ನು ವಿತರಿಸಿದ್ದ ಇನ್ನರ್ ವೀಲ್ ಕ್ಲಬ್, ಲಯನ್ಸ್ ಕ್ಲಬ್ ಪದಾಧಿಕಾರಿಗಳು ಶನಿವಾರ ಪೂರ್ವಿ ಸಂಗೀತ ಅಕಾಡೆಮಿ ಮತ್ತು ಯುರೇಕಾ ಅಕಾಡೆಮಿಯ ಸದಸ್ಯರೊಂದಿಗೆ ಮತ್ತೊಮ್ಮೆ ತೆರಳಿ ಮನೆ ಕಳೆದುಕೊಂಡ ಕುಟುಂಬಗಳಿಗೆ ನೆರವು ನೀಡಿದರು.
ಬೆಳಗಿನಿಂದ ಸಂಜೆಯವರೆಗೆ ಮೂಡಿಗೆರೆ ತಾಲ್ಲೂಕಿನಲ್ಲಿ ಸಂಚರಿಸಿದ ಪದಾಧಿಕಾರಿಗಳು ಮಲೆಮನೆ ಗ್ರಾಮದಲ್ಲಿ ಮನೆ ಕಳೆದುಕೊಂಡ ಆರು ಕುಟುಂಬಗಳಿಗೆ ಅವರ ಮನೆಗಳಿಗೇ ತೆರಳಿ ತಲಾ 65 ಸಾವಿರ ರೂ ಹಾಗೂ ಹಿರೇಬೈಲಿನಲ್ಲಿ ಮನೆ ಕಳೆದುಕೊಂಡ ಮೂರು ಕುಟುಂಬಗಳಿಗೆ ತಲಾ 10 ಸಾವಿರ ರೂ ವಿತರಿಸಿದರು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಪಿ.ಸುರೇಶ್ ಸಂತ್ರಸ್ಥರ ನೆರವಿಗಾಗಿ ಇನ್ನರ್ ವೀಲ್ ಕ್ಲಬ್ 2.5 ಲಕ್ಷ, ಲಯನ್ಸ್ ಕ್ಲಬ್ ತನ್ನ ಸದಸ್ಯರಿಂದ ಸಂಗ್ರಹಿಸಿದ 1.25 ಲಕ್ಷ ಹಾಗೂ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಮತ್ತು ಯುರೇಕಾ ಅಕಾಡೆಮಿ ಸಹಯೋಗದಲ್ಲಿ ನಗರದಲ್ಲಿ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸಂಗ್ರಹವಾದ 40 ಸಾವಿರ ರೂಗಳನ್ನು ಮನೆ ಕಳೆದುಕೊಂಡವರಿಗೆ ಇಂದು ನೀಡಲಾಗಿದೆ ಎಂದು ತಿಳಿಸಿದರು.
ಮನೆ ಕಳೆದುಕೊಂಡ ಕುಟುಂಬಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ದತ್ತು ತೆಗೆದುಕೊಳ್ಳುವುದು ಸೇರಿದಂತೆ ಇನ್ನೂ ಹೆಚ್ಚಿನ ನೆರವನ್ನು ಮುಂದಿನ ದಿನಗಳಲ್ಲಿ ನೀಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷ ದಿವ್ಯಾ ವಿಕ್ರಂ, ಪದಾಧಿಕಾರಿಗಳಾದ ಕವಿತಾ ನಿಯತ್, ಜಯಂತಿ, ಅನಿಲ್, ರೂಪ, ಸನ್ನಿಧಿ, ರಘುರಾಂ, ಯುರೇಕಾ ಅಕಾಡೆಮಿ ಪ್ರಾಂಶುಪಾಲ ದೀಪಕ್ ದೊಡ್ಡಯ್ಯ, ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್.ಆರ್.ಹರೀಶ್, ಪದಾಧಿಕಾರಿಗಳಾದ ಕೆ.ಡಿ.ಪುಟ್ಟಣ್ಣ, ಮನೋಜ್ ಬಸವರಾಜ್, ಜಯರಾಮೇಗೌಡ , ಬಿಜೆಪಿ ಯುವ ಮುಖಂಡರಾದ ಪರೀಕ್ಷಿತ್ ಜಾವಳಿ ಹಾಜರಿದ್ದರು.










