ಚಿಕ್ಕಮಗಳೂರು : ಡಿಸಿಎಂ ಅಶ್ವತ್ಥ್ ನಾರಾಯಣ್ ಅವರಿಗೆ ಝೀರೋ ಟ್ರಾಫಿಕ್-ಬಿಸಿಲಲ್ಲೇ ನಿಂತು ರೇಗಾಡಿದ ವಾಹನ ಸವಾರರು…

717

ಚಿಕ್ಕಮಗಳೂರು : ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ನನಗೆ ಝೀರೋ ಟ್ರಾಫಿಕ್ ಬೇಡ ಅನ್ನೋ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರು ಜಿಲ್ಲಾ ಕೇಂದ್ರದಲ್ಲಿ ಉಪಮುಖ್ಯಮಂತ್ರಿಯ ಅಧಿಕಾರವನ್ನು ಅನುಭವಿಸುತ್ತಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ಇಂದು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದ ಸಂದರ್ಭ 4 ಬಾರಿ ಝಿರೋ ಟ್ರಾಫಿಕ್ನಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯುಂಟುಮಾಡಿದ್ದಾರೆ. ಬಿಜೆಪಿ ಕಚೇರಿಗೆ ಆಗಮಿಸಿ ಅಲ್ಲಿಂದ ಒಕ್ಕಲಿಗ ಕಲ್ಯಾಣ ಮಂಟಪಕ್ಕೆ ಬರುವ ಮಾರ್ಗದಲ್ಲಿ 4 ಬಾರಿ ಝಿರೋ ಟ್ರಾಫಿಕ್ನಲ್ಲಿ ಬಂದಿದ್ದಾರೆ. ಕಾರ್ಯಕ್ರಮ ಮುಗಿಸಿ ಹೋಗುವಾಗಲೂ ಝೀರೋ ಟ್ರಾಫಿಕ್ನಲ್ಲಿ ಸಂಚರಿಸಿ ತಮ್ಮ ಮಾತನ್ನ ತಾವೇ ಮುರಿದಿದ್ದಾರೆ. ಬಿಜೆಪಿ ಸರ್ಕಾರ ರಚನೆ ಮಾಡಿದಾಗಲೂ ಹೈಕಮಾಂಡ್ ಮೂವರು ಡಿಸಿಎಂ ಇದ್ದೀರಾ, ಎಲ್ಲರೂ ಝಿರೋ ಟ್ರಾಫಿಕ್ ಪಡೆಯಬೇಡಿ. ಸಾರ್ವಜನಿಕರಿಗೆ ತೊಂದರೆಯಾಗುತ್ತೆ ಎಂದಿದ್ರು. ಆಗ ಆಯ್ತು ಎಂದಿದ್ದ ಅಶ್ವಥ್ ನಾರಾಯಣ್ ಅವರು ಮಾಧ್ಯಮಗಳ ಮುಂದೆಯೂ ನಾನು ಝಿರೋ ಟ್ರಾಫಿಕ್ ಪಡೆಯುವುದಿಲ್ಲ ಎಂದಿದ್ರು. ಆದ್ರೆ, ಬೆಂಗಳೂರಿನಲ್ಲಿ ಝಿರೋ ಟ್ರಾಫಿಕ್ ಪಡೆಯದ ಅಶ್ವಥ್ ನಾರಾಯಣ್ ಅವರು ಚಿಕ್ಕಮಗಳೂರಿನಲ್ಲಿ ಪಡೆದು ಅಧಿಕಾರದ ಗತ್ತನ್ನು ತೋರಿದ್ದಾರೆ. ಇದರಿಂದ ಸಾರ್ವಜನಿಕರು ಹೈರಾಣಾಗಿದ್ದು, ವಾಹನ ಸವಾರರು ಬಿಸಿಲಲ್ಲೇ ನಿಂತು ಪೊಲೀಸರು ಹಾಗೂ ಉಪಮುಖ್ಯಮಂತ್ರಿಗಳ ವಿರುದ್ಧ ರೇಗಾಡಿದ್ದಾರೆ.