ಚಿಕ್ಕಮಗಳೂರು : ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರಿಗೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ನಗರದಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿತು.
ಕೋಟೆ ಬಡಾವಣೆಯ ಪರಿಷತ್ತಿನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು ನಿಸಾರ್ ಅಹಮದ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು, ಅವರ ಅತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸಾಹಿತಿ ಡಾ|| ಬೆಳವಾಡಿ ಮಂಜುನಾಥ್ ನಿಸಾರ್ ಅಹಮದ್ ಅವರು ಹಿಂದೂ ಮುಸ್ಮಿಂ, ಉರ್ದು ಕನ್ನಡ ಮತ್ತು ನವ್ಯ ನವೋದಯದ ಸಮನ್ವಯ ಕವಿಯಾಗಿದ್ದರು ಎಂದರು.
ನಿಸಾರ್ ಅಹಮದ್ ಅವರು ಹಾಡಲು ಸೂಕ್ತವಾದ ಕವಿತೆಗಳನ್ನು ರಚಿಸುತ್ತಿದ್ದರು, ಅವರ ಕವಿತೆಗಳನ್ನು ಯಾರು ಬೇಕಾದರೂ ಸುಲಭವಾಗಿ ಓದಲು ಮತ್ತು ಹಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಶ್ ಕ್ಯಾತನಬೀಡು ಮಾತನಾಡಿ ನೆದರ್‍ಲ್ಯಾಂಡ್‍ನ ಖ್ಯಾತ ಕವಿ ಮೆರೋನ್ಡಾ ಅವರನ್ನು ಕನ್ನಡಕ್ಕೆ ಪರಿಚಯಿಸಿದವರು ನಿಸಾರ್ ಅಹಮದ್ ಎಂದು ತಿಳಿಸಿದರು.
ನಿಸಾರ್ ಅಹಮದ್ ಅವರ ಸರ್ವಾಧ್ಯಕ್ಷತೆಯಲ್ಲಿ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ತಾವು ಭಾಗವಹಿಸಿದ್ದು ತಮ್ಮ ಭಾಗ್ಯ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ರೈತ ಸಂಘದ ಮುಖಂಡ ಗುರುಶಾಂತಪ್ಪ, ಸಿಪಿಐ ಮುಖಂಡ ಬಿ.ಅಮ್ಜದ್, ಸಾಹಿತಿ ಬಾಣೂರು ಚೆನ್ನಪ್ಪ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ಪ್ರಭುಸೂರಿ, ಸತ್ಯನಾರಾಯಣ ಹಾಜರಿದ್ದರು.










