ಚಿಕ್ಕಮಗಳೂರು : ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ವಿಚಾರಧಾರೆಗಳನ್ನು ಶೋಷಿತ ವರ್ಗದವರು ಮೈಗೂಡಿಸಿಕೊಳ್ಳಬೇಕು : ಕೆ.ಟಿ.ರಾಧಾಕೃಷ್ಣ.

160
firstsuddi

ಚಿಕ್ಕಮಗಳೂರು : ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ಆದರ್ಶ, ಸಂದೇಶ ಮತ್ತು ವಿಚಾರಧಾರೆಗಳನ್ನು ಶೋಷಿತ ವರ್ಗದವರು ಮೈಗೂಡಿಸಿಕೊಳ್ಳಬೇಕು ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಸಲಹೆ ಮಾಡಿದರು.
ನಗರದ ಬಿ.ಎಸ್.ಪಿ ಕಛೇರಿಯಲ್ಲಿ ನಡೆದ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ 141ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಬದುಕಿನುದ್ದಕ್ಕೂ ವೈಚಾರಿಕ ನೆಲೆಗಟ್ಟಿನಲ್ಲಿ ಹೋರಾಟ ಮಾಡುವ ಮೂಲಕ ಬಹುಸಂಖ್ಯಾತರ ಬದುಕಿಗೆ ದಾರಿದೀಪವಾದ ಪೆರಿಯಾರ್ ರಾಮಸ್ವಾಮಿ ಅವರ ವಿಚಾರಧಾರೆಗಳನ್ನು ರಾಜಕಾರಣಿಗಳು ಯಥಾವತ್ತಾಗಿ ಅಳವಡಿಸಿಕೊಂಡಲ್ಲಿ ಭವ್ಯ ಭಾರತದ ನಿರ್ಮಾಣವಾಗುತ್ತದೆ ಎಂದರು.
ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಪೆರಿಯಾರ್ ವಿಚಾರಧಾರೆಗಳು ಮತ್ತು ಅವರ ವೈಜ್ಞಾನಿಕ ಚಿಂತನೆ ದಾರಿದೀಪವಾಗಿವೆ, ಅವುಗಳ ಅನುಷ್ಠಾನದಿಂದ ಮೌಢ್ಯಮುಕ್ತ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಪಿ.ಪರಮೇಶ್ವರ್ ಮಾತನಾಡಿ ಅಸೃಷ್ಯತೆ, ಮತಾಂಧತೆ ಮತ್ತು ಮೌಢ್ಯದ ವಿರುದ್ದ ಸಮಾಜದಲ್ಲಿ ಜಾಗೃತಿ ಮೂಡಿಸಿದ ಪೆರಿಯಾರ್ ಅವರು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಂತೆ ಎಲ್ಲರನ್ನೂ ಪ್ರೇರೆಪಿಸುತ್ತಿದ್ದರು ಎಂದು ಹೇಳಿದರು.
ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ, ಬಿಎಸ್‍ಪಿ ತಾಲ್ಲೂಕು ಅಧ್ಯಕ್ಷ ಹರೀಶ್, ಜಿಲ್ಲಾ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷೆ ರೇಖಾ, ಟಿ.ಎಸ್.ಮಂಜುಳಾ ಉಪಸ್ಥಿತರಿದ್ದರು.