ಚಿಕ್ಕಮಗಳೂರು : ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥಗಳ ಬಳಕೆ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ…

266
firstsuddi

ಚಿಕ್ಕಮಗಳೂರು : ಆಹಾರ ಪದಾರ್ಥಗಳಲ್ಲಿ ರಾಸಾಯನಿಕ ಬಳಕೆ ವಿರುದ್ದ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಇಲ್ಲಿನ ಶಾಂತಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸ್ವತಃ ತಯಾರಿಸಿ ಪ್ರದರ್ಶಿಸಿದ ಪೌಷ್ಠಿಕಾಂಶಯುಕ್ತ ಆಹಾರಗಳು ಸಾರ್ವಜನಿಕರ ಗಮನ ಸೆಳೆದವು.
ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೈಸರ್ಗಿಕವಾಗಿ ದೊರೆಯುವ ಪದಾರ್ಥಗಳನ್ನು ಬಳಸಿ ಪೌಷ್ಠಿಕಾಂಶಯುಕ್ತ ಆಹಾರವನ್ನು ತಯಾರಿಸಿ ಪ್ರದರ್ಶಿಸುವುದರ ಜೊತೆಗೆ ಆರೋಗ್ಯಕ್ಕೆ ಪೌಷ್ಠಿಕಾಂಶಯುಕ್ತ ಆಹಾರ ಬಳಕೆಯ ಅಗತ್ಯವನ್ನು ಸಾರ್ವಜನಿಕರಿಗೆ ವಿವರಿಸಿದರು.
ನುಗ್ಗೇಸೊಪ್ಪಿನ ಬರ್ಫಿ, ಬಾಳೆಹಣ್ಣಿನ ಹಲ್ವಾ, ಗೋಧಿಹಿಟ್ಟಿನ ಬರ್ಫಿ, ಆಲೂಗೆಡ್ಡೆಯಿಂದ ತಯಾರಿಸಲಾದ ಪರೋಟ, ಬೀಟ್‍ರೂಟ್ ಹಲ್ವಾ, ಅಗಸೇ ಸೊಪ್ಪಿನ ಪತ್ರೊಡೆ, ಶೇಂಗಾಬೀಜದಿಂದ ತಯಾರಿಸಲಾದ ಹಾಲು, ಮೂಲಂಗಿಯ ರಾಯಿತ, ಹೆಸರುಬೇಳೆ ಜೂಸ್, ಹೆಸರುಕಾಳಿನ ಉಂಡೆ, ಬೀಟ್‍ರೂಟ್ ಚಪಾತಿ ಸೇರಿದಂತೆ ಪ್ರದರ್ಶನದಲ್ಲಿದ್ದ ಹಲವು ಆಹಾರ ಪದಾರ್ಥಗಳು ನೋಡುಗರ ಬಾಯಲ್ಲಿ ನೀರೂರಿಸಿದವು.
ಇದೇ ವೇಳೆ ಸಾರ್ವಜನಿಕರಿಗೆ ರಾಸಾಯನಿಕ ಪದಾರ್ಥಗಳಿಂದ ಆಗುವ ಹಾನಿಯನ್ನು ವಿವರಿಸುವುದರ ಜೊತೆಗೆ ಪೌಷ್ಠಿಕಾಂಶಯುಕ್ತ ಆಹಾರಗಳನ್ನು ತಯಾರಿಸುವ ವಿಧಾನ ಮತ್ತು ಪೌಷ್ಠಿಕ ಆಹಾರದಿಂದ ಆಗುವ ಲಾಭಗಳ ಕುರಿತು ವಿದ್ಯಾರ್ಥಿಗಳು ಸಾರ್ವಜನಿಕರಿಗೆ ತಿಳಿಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ಪ್ರಾಂಶುಪಾಲೆ ಸುಕುಮಾರಿ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥಗಳ ಬಳಕೆ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಲ್ಲಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ಚೇತನಾ ಗ್ರಾಮೀಣ ಜನರಲ್ಲಿ ಪೌಷ್ಠಿಕಾಂಶಯುಕ್ತ ಆಹಾರದ ಮಹತ್ವ ಕುರಿತು ಜಾಗೃತಿ ಮೂಡಿಸಲು ಇಂತಹ ಪ್ರದರ್ಶನಗಳನ್ನು ಹಳ್ಳಿಗಳಲ್ಲಿ ಹೆಚ್ಚು ಆಯೋಜಿಸಬೇಕು ಎಂದು ಸಲಹೆ ಮಾಡಿದರು.