ಚಿಕ್ಕಮಗಳೂರು : ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಸಾರ್ವಜನಿಕರ ಮನವೊಲಿಸುವ ನಿಟ್ಟಿನಲ್ಲಿ ಭಾರತ ಸೇವಾದಳದ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಆಂದೋಲನ ನಡೆಸಿದರು.ನಗರ ಹೊರವಲಯದ ಉಂಡೇದಾಸರಹಳ್ಳಿ ಸೇರಿದಂತೆ ವಿವಿಧ ಬಡಾವಣೆಗಳಿಗೆ ತೆರಳಿದ ಕಾರ್ಯಕರ್ತರು ಮನೆಮನೆಗೆ ತೆರಳಿ ಉಚಿತ ಶಿಕ್ಷಣ ಸೇರಿದಂತೆ ಸರ್ಕಾರಿ ಶಾಲೆಗಳಲ್ಲಿರುವ ಸೌಲಭ್ಯಗಳನ್ನು ಪೋಷಕರಿಗೆ ವಿವರಿಸಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವಂತೆ ಮನವಿ ಮಾಡಿದರು.ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಭಾರತ ಸೇವಾದಳದ ಜಿಲ್ಲಾ ಖಜಾಂಚಿ ಜಗದೀಶಾಚಾರ್ ಖಾಸಗಿ ಶಾಲೆಗಳಲ್ಲಿರುವ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲೂ ಲಭ್ಯವಿದೆ ನುರಿತ ಶಿಕ್ಷಕರಿದ್ದಾರೆ, ಅನೇಕ ಸರ್ಕಾರಿ ಶಾಲೆಗಳು ಪ್ರತೀವರ್ಷ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯುತ್ತಿವೆ ಎಂದರು.ಸರ್ಕಾರಿ ಶಾಲೆಗಳಲ್ಲಿ ಓದಿರುವ ಅನೇಕ ವಿದ್ಯಾರ್ಥಿಗಳು ಡಾಕ್ಟರ್, ಇಂಜಿನಿಯರ್, ಐಎಎಸ್, ಐಪಿಎಸ್ ಸೇರಿದಂತೆ ಅನೇಕ ಹುದ್ದೆಗಳಲ್ಲಿದ್ದಾರೆ ಎಂದ ಅವರು ಬಡ ಪೋಷಕರು ಇದನ್ನು ಅರಿಯಬೇಕು, ಒಣಪ್ರತಿಷ್ಠೆ ಬಿಡಬೇಕು, ಸಾಲಸೋಲ ಮಾಡಿ ಲಕ್ಷಾಂತರ ರೂ ವ್ಯಯಿಸಿ ಖಾಸಗಿ ಶಾಲೆಗೆ ಸೇರಿಸುವ ಬದಲು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಕಾರ್ಯದರ್ಶಿ ಹಂಪಯ್ಯ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಸಮವಸ್ತ್ರ, ಪಠ್ಯಪುಸ್ತಕ, ಬಿಸಿಊಟ, ಲೇಖನ ಸಾಮಾಗ್ರಿಗಳು, ವಿದ್ಯಾರ್ಥಿ ಭತ್ಯೆ, ಪ್ರಯಾಣ ಭತ್ಯೆ ಸೇರಿದಂತೆ ಅನೇಕ ಸವಲತ್ತುಗಳನ್ನು ನೀಡುವುದರ ಜೊತೆಗೆ ಉಚಿತವಾಗಿ ಶಿಕ್ಷಣವನ್ನು ಒದಗಿಸಲಾಗುತ್ತಿದ್ದು ಬಡ ಪೋಷಕರು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್, ತಾಲ್ಲೂಕು ಸಂಘಟಕ ಎಸ್.ಈ.ಲೋಕೇಶ್ವರಚಾರ್, ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ, ಶಿಕ್ಷಕಿಯರಾದ ಸುಮಾರಾಣಿ, ಮೀನಾಕ್ಷಿ, ತಿಪ್ಪೇರುದ್ರಪ್ಪ, ದೊಡ್ಡಪ್ಪ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ್ವರಪ್ಪ, ತಾಲ್ಲೂಕು ಅಧ್ಯಕ್ಷ ಕಾಳಯ್ಯ, ಶೇಖರ್, ರಾಜ್‍ಕುಮಾರ್ ಹಾಜರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಭಾರತ ಸೇವಾದಳದ ಜಿಲ್ಲಾ ಸಮಿತಿಯಿಂದ ಆಂದೋಲನ…










