ಚಿಕ್ಕಮಗಳೂರು : ಮೀನುಗಾರರಿಗೆ ಮೀನು ಸಾಕಾಣಿಕೆ ಮಾಡಲು ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಸೌಲಭ್ಯಗಳನ್ನು ಸರ್ಕಾರ ಒದಗಿಸಿಕೊಡಬೇಕು : ಕೆ.ಸಿ.ವಸಂತಕುಮಾರ್.

341
firstsuddi

ಚಿಕ್ಕಮಗಳೂರು : ಮೀನುಗಾರರಿಗೆ ಮೀನು ಸಾಕಾಣಿಕೆ ಮಾಡಲು ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವುದರ ಜೊತೆಗೆ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಸರ್ಕಾರ ಅವರಿಗೆ ಒದಗಿಸಿಕೊಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆ.ಸಿ.ವಸಂತಕುಮಾರ್ ಒತ್ತಾಯಿಸಿದರು.
ನಗರದ ಲಕ್ಷ್ಮೀಶ ಸಮುದಾಯ ಭವನದಲ್ಲಿ ಸೋಮವಾರ ನಡೆದ ತಾಲ್ಲೂಕು ಶ್ರೀ ಗಂಗಾ ಪ.ಜಾತಿ/ಪ.ವರ್ಗದ ಮೀನುಗಾರಿಕೆ ವಿವಿದೋದ್ದೇಶ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೀನುಗಾರರು ಮೀನು ಕೃಷಿ ಮಾಡಲು ಸರ್ಕಾರ ಅಥವಾ ಇಲಾಖೆ ಕೆರೆ ಕೊಟ್ಟರಷ್ಟೇ ಸಾಲದು, ಅವರಿಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಕಲ್ಪಿಸಬೇಕು, ಕೆರೆಗಳಲ್ಲಿ ಪಂಪ್‍ಸೆಟ್ ಮೂಲಕ ಅಕ್ರಮವಾಗಿ ನೀರು ಹೊಡೆಯುವುದನ್ನು ತಡೆಗಟ್ಟಬೇಕು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮೀನುಗಾರರ ಸಂಘದ ಸಭೆಗಳಿಗೆ ಹಾಜರಾಗಿ ಇಲಾಖೆಯಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಪ.ಜಾತಿ/ಪ.ವರ್ಗದ ಮೀನುಗಾರರು ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಕುಲಕಸುಬಿನ ಜೊತೆಗೆ ಬೇರೆ ವೃತ್ತಿಯನ್ನೂ ಮಾಡಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ವಿ.ಧರ್ಮೇಶ್ ರಾಜ್ಯ ಸರ್ಕಾರ ಮೀನುಗಾರಿಕೆಯ ಅಭಿವೃದ್ದಿಗೆ ಮೀನುಗಾರಿಕೆ ಇಲಾಖೆಗೆ ಕೋಟ್ಯಾಂತರ ರೂ ಹಣ ನೀಡುತ್ತಿದೆ ಆದರೆ ಮೀನುಗಾರರಿಗೆ ಇದುವರೆಗೂ ಯಾವುದೇ ಸಾಲ ಸೌಲಭ್ಯ ನೀಡಿಲ್ಲ ಹಾಗಾಗಿ ಪ.ಜಾತಿ/ಪ.ವರ್ಗದ ಮೀನುಗಾರರು ಹಣವಿಲ್ಲದೆ ಕುಲಕಸುಬು ಮಾಡಲಾಗದೇ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ ಎಂದರು.
ಪ.ಜಾತಿ/ಪ.ವರ್ಗದ ಮೀನುಗಾರರು ಆರ್ಥಿಕವಾಗಿ ಸಬಲರಾಗಬೇಕಾದರೆ ಅವರಿಗೆ ರಾಜ್ಯದ ಯಾವುದೇ ಭಾಗದಲ್ಲಾದರೂ ಮೀನುಗಾರಿಕೆ ಮಾಡಲು ಸರ್ಕಾರ ಅವಕಾಶ ನೀಡಬೇಕು. ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಚಂದ್ರಪ್ಪ, ಸಂಘದ ನಿರ್ದೇಶಕರಾದ ಮಂಜುನಾಥ್, ಟಿ.ರಾಮಚಂದ್ರ, ರಾಧಮ್ಮ, ಚಂದ್ರಪ್ಪ, ಸಿ.ಡಿ.ಕಾವ್ಯ, ದಿವ್ಯ, ಯಶೋಧರ ಉಪಸ್ಥಿತರಿದ್ದರು.